Vijaypura

ಸಚಿವ ಸಂಪುಟ ವಿಸ್ತರಣೆ: ಎಂ.ಬಿ. ಪಾಟೀಲ್ ವಿರುದ್ಧ ‘ಬೆಡ್‌ರೂಮ್ ಬಾಡಿಗೆ’ ಕುರಿತು ಹೇಳಿಕೆ ನೀಡಿದ ಶಾಸಕ ಯತ್ನಾಳ ಕಾಂಗ್ರೆಸ್ ಸಚಿವ ಸಂಪುಟ ‘ಗುಂಡಾಗಳ ಗೂಡು’; ರಾಜೀನಾಮೆ ನಾಟಕ’ – ಯತ್ನಾಳ್ ವಾಗ್ದಾಳಿ”

Share

ರಾಜ್ಯ ಸಚಿವ ಸಂಪುಟ ವಿಸ್ತರಣೆ, ಕಾಂಗ್ರೆಸ್ ಶಾಸಕರ ರಾಜೀನಾಮೆ ಬೆಳವಣಿಗೆ ಹಾಗೂ ವಿಜಯಪುರ ಜಿಲ್ಲೆಗೆ ಎರಡನೇ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಚಿವ ಸಂಪುಟವನ್ನು ಟೀಕಿಸಿದ ಯತ್ನಾಳ್, “ಇದು ಗುಂಡಾಗಳ ಗೂಡಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖರು ಪ್ರಾಮಾಣಿಕರನ್ನು ಕಡೆಗಣಿಸಿ ಕ್ರಿಮಿನಲ್ ಹಿನ್ನೆಲೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ರಾಜ್ಯಕ್ಕೆ ತಪ್ಪು ಸಂದೇಶ ನೀಡುವ ಸಚಿವ ಸಂಪುಟವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಭ್ರಷ್ಟಾಚಾರ ಹಾಗೂ ಗುಂಡಾಗಿರಿ ಪ್ರಕರಣಗಳಲ್ಲಿ ಆರೋಪ ಎದುರಿಸಿದವರೇ ಇದ್ದಾರೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ರಾಜೀನಾಮೆ ಕೊಡುವುದೆಲ್ಲ ನಾಟಕ. ಶಾಸಕ ಸ್ಥಾನ ಸುಲಭವಾಗಿ ಸಿಗುವುದಿಲ್ಲ. ಎರಡು ದಿನಗಳಲ್ಲಿ ಹೈಕಮಾಂಡ್ ಮನವೊಲಿಸಿ ಎಲ್ಲರೂ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಒಬ್ಬರೂ ರಾಜೀನಾಮೆ ಕೊಡುವುದಿಲ್ಲ, ಯಾರಿಗೂ ಆ ತಾಕತ್ತು ಇಲ್ಲ” ಎಂದು ಹೇಳಿದರು.
ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ತಪ್ಪಿದ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲರ ಕುರಿತು ಮಾತನಾಡಿದ ಯತ್ನಾಳ್, “ಎಂ.ಬಿ. ಪಾಟೀಲ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರು. ಅವರು ಹೈಕಮಾಂಡ್‌ನಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವುದರಿಂದ ಸಚಿವರಾಗಿದ್ದಾರೆ. ಶಿವಾನಂದ ಪಾಟೀಲ ಹಾಗೂ ಯಶವಂತ ರಾಯಗೌಡ ಪಾಟೀಲರಿಗೂ ಸಚಿವರಾಗುವ ಅವಕಾಶವಿದ್ದರೂ ಅದು ಸಾಧ್ಯವಾಗಿಲ್ಲ” ಎಂದು ಹೇಳಿದರು. ಬಿಜೆಪಿಯ ಹಿಂದಿನ ಸಚಿವ ಸಂಪುಟ ರಚನೆ ಕುರಿತು ಕೂಡ ಯತ್ನಾಳ್ ಆರೋಪ ಮಾಡಿದರು. “ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬದಲಾಗಿತ್ತು. ರಾತ್ರೋರಾತ್ರಿ ಹಣದ ಪ್ರಭಾವದಿಂದ ಕೆಲವರು ಸಚಿವರಾಗಿದ್ದರು. ಯಡಿಯೂರಪ್ಪ ಅವಧಿಯಲ್ಲೂ ಹಣದ ವ್ಯವಹಾರ ನಡೆದಿದೆ” ಎಂದು ದೂರಿದರು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿದ ಅವರು, “ಸಿದ್ದರಾಮಯ್ಯ ಅವರಿಗೆ ಸ್ವಾಭಿಮಾನ ಇದ್ದರೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕು” ಎಂದರು.

 

Tags:

error: Content is protected !!