Belagavi

ಜಿ.ಎ.ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ; ಗುರುವಂದನಾ ಕಾರ್ಯಕ್ರಮ.19 ವರ್ಷಗಳ ಬಳಿಕ ಶಾಲೆಗೆ ಭೇಟಿ ನೀಡಿ ನಲಿದ ಹಳೆಯ ವಿದ್ಯಾರ್ಥಿಗಳು

Share

ಬಾಲ್ಯದ ದಿನಗಳನ್ನು ಕಲಿಸಿದ ಗುರುಗಳನ್ನು ನೆನೆದು, ಜೊತೆಯಾಗಿ ಓದಿದ ಗೆಳೆಯರೆಲ್ಲರೂ ಸುಮಾರು 19 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದರೆ ಹೇಗಿರುತ್ತದೆ? ಹೌದು, ಕೆ.ಎಲ್.ಇ. ಸಂಸ್ಥೆಯ ಜಿ.ಎ. ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ವಿಶೇಷ ವರದಿ ಇಲ್ಲಿದೆ.
ಬೆಳಗಾವಿಯ ಕೆ.ಎಲ್.ಇ. ಸಂಸ್ಥೆಯ ಜಿ.ಎ. ಹೈಸ್ಕೂಲಿನ 2006–07ನೇ ಸಾಲಿನ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಲಾಗಿದ್ದ “ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ”ವು ಆಗಸ್ಟ್ 23ರಂದು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಶಿಕ್ಷಕ ದೇವರಶಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವು ದೀಪ ಪ್ರಜ್ವಲನೆ ಮತ್ತು ನಾಡಗೀತೆಯೊಂದಿಗೆ ವಿಧ್ಯುಕ್ತವಾಗಿ ಆರಂಭವಾಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕರು ಹಾಗೂ ಸಹಪಾಠಿ ವಿದ್ಯಾರ್ಥಿಗಳಿಗೆ ಎಲ್ಲರೂ ಸೇರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ನಂತರ ನಡೆದ ಗುರುವಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಂಭಾರ, ಬಳಿಗಾರ, ಅಕ್ಕಿ, ನಿಡೋಣಿ, ನೇಕಾರ, ವೀರಗಂಟಿ, ನಿರ್ವಾಣಿ, ಸಲಗರೆ, ಗದಗ, ಹಾಗೂ ಶಿಕ್ಷಕಿಯರಾದ ಬಸಾಪುರಿ, ಕುಂಬಿ. ಶಿವಲೀಲಾ ಸೇರಿದಂತೆ ಹಲವು ಗುರುಗಳು ಉಪಸ್ಥಿತರಿದ್ದರು. ತಮ್ಮ ವಿದ್ಯಾರ್ಥಿಗಳಿಂದ ಆತ್ಮೀಯ ಸನ್ಮಾನ ಸ್ವೀಕರಿಸಿದ ಗುರುಗಳು, ಹಿಂದಿನ ದಿನಗಳ ಮಧುರ ನೆನಪುಗಳನ್ನು ಹಾಗೂ ವಿದ್ಯಾರ್ಥಿಗಳ ಗುಣಸ್ವಭಾವಗಳನ್ನು ನೆನೆದು ಭಾವುಕರಾದರು. ಇದು ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಮಧ್ಯಾಹ್ನದ ನಂತರ ವಿವಿಧ ಮನರಂಜನಾ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. ನಂತರ ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪಿನ ಶಾಲಾ ಆವರಣಕ್ಕೆ ಭೇಟಿ ನೀಡಿ, ತರಗತಿ ಕೊಠಡಿಗಳನ್ನು ವೀಕ್ಷಿಸಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು, ಗುರುಗಳು ಮತ್ತು ಅವರ ಕುಟುಂಬದವರ ಸಕ್ರಿಯ ಪಾಲ್ಗೊಳ್ಳುವಿಕೆ ಈ ಕಾರ್ಯಕ್ರಮವನ್ನು ಸ್ನೇಹ, ಗೌರವ ಹಾಗೂ ಮರೆಯಲಾರದ ಭಾವನಾತ್ಮಕ ನೆನಪುಗಳೊಂದಿಗೆ ಯಶಸ್ವಿಯಾಗಿ ಸಂಪನ್ನಗೊಳಿಸಿತು.

Tags:

error: Content is protected !!