ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಮದುರ್ಗ ತಾಲೂಕಿನ ರೈತರು ತೀವ್ರ ಪ್ರತಿಭಟನೆ ನಡೆಸಿದರು. ಒಂದು ಕಡೆ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವನ್ನಾಗಿ ಘೋಷಿಸುವಂತೆ ಆಗ್ರಹಿಸಿದರೆ, ಮತ್ತೊಂದೆಡೆ ಹೈದರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಕೂಡಲೇ ಸರ್ವಿಸ್ ರಸ್ತೆ ಹಾಗೂ ನ್ಯಾಯಯುತ ಪರಿಹಾರ ನೀಡಬೇಕೆಂದು ಆಕ್ರೋಶ ಹೊರಹಾಕಿದರು.

ಬೆಳಗಾವಿ ಜಿಲ್ಲೆಯಲ್ಲಿ ತೀವ್ರವಾಗಿ ಕಾಡುತ್ತಿರುವ ಬರಗಾಲದ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಹೊರಬಂದ ರೈತ ಮುಖಂಡರು ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕೆಲವೇ ಕೆಲವು ತಾಲೂಕುಗಳನ್ನು ಮಾತ್ರ ಬರಪೀಡಿತವೆಂದು ಘೋಷಿಸಿರುವುದನ್ನು ಖಂಡಿಸಿದ ಅವರು, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣವಾಗಿ ಕಮರಿ ಹೋಗಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕೂಡಲೇ ಇಡೀ ಬೆಳಗಾವಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ, ಸಂಪೂರ್ಣ ನಷ್ಟ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಹೈದರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಜಮೀನು ಕಳೆದುಕೊಂಡ ರೈತರಿಗೆ ಸರ್ವಿಸ್ ರಸ್ತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಮದುರ್ಗ ರೈತ ಸಂಘದ ಅಧ್ಯಕ್ಷ ಜಗದೀಶ್ ದೇವರೆಡ್ಡಿ ನೇತೃತ್ವದಲ್ಲಿ ನೂರಾರು ರೈತರು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು. ಹೆದ್ದಾರಿ ಕಾಮಗಾರಿಗೆ ಭೂಮಿ ಕೊಟ್ಟ ರೈತರಿಗೆ ಜಮೀನಿಗೆ ತೆರಳಲು ಸರ್ವಿಸ್ ರಸ್ತೆ ಮಾಡಿಕೊಡದೆ ತಾರತಮ್ಯ ಎಸಗಲಾಗಿದ್ದು, ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಕಾಮಗಾರಿಯನ್ನು ಸಂಪೂರ್ಣವಾಗಿ ತಡೆಯುವುದಾಗಿ ಎಚ್ಚರಿಸಿದರು.
ಈ ವೇಳೆ ರಾಮದುರ್ಗ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
