ಪತ್ನಿಯನ್ನು ಕೊಂದು ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮೌಲಾಸಾಬ್ (28) ಎಂಬಾತನೇ ತನ್ನ ಪತ್ನಿ ಸಲ್ಮಾ (21) ಎಂಬಾಕೆಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಒಂದೂವರೆ ವರ್ಷದ ಮಗುವಿನ ಎದುರೇ ಮೌಲಾಸಾಬ್ ತನ್ನ ಪತ್ನಿಯನ್ನು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದಷ್ಟೇ ಇವರ ವಿವಾಹವಾಗಿತ್ತು. ಅದ್ಯಾವ ಕಾರಣಕ್ಕೋ ಏನೋ ಮೌಲಾಸಾಬ್ ಇದೀಗ ತನ್ನ ಪತ್ನಿಯನ್ನು ಕೊಂದು ತಾನೂ ಸಾವಿಗೀಡಾಗಿದ್ದಾನೆ. ತಡರಾತ್ರಿವರೆಗೂ ಮನೆಯಲ್ಲಿ ಏನೂ ಶಬ್ದ ಬಾರದೇ ಇದ್ದಿದ್ದರಿಂದ ವೃದ್ಧೆಯೊಬ್ಬರು ಹೋಗಿ ನೋಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಕೊಲೆಯಾದ ಸಲ್ಮಾ ಮನೆಯವರು ಗರಗ ಗ್ರಾಮಕ್ಕೆ ಬರುತ್ತಿದ್ದಂತೆಯೇ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಸಂಭವಿಸಿದೆ. ಎರಡೂ ಕುಟುಂಬದವರು ಪರಸ್ಪರ ಹೊಡೆದಾಟಕೆ ಮುಂದಾಗಿದ್ದಾರೆ. ಅತೆ ಮಾವನ ಕಾಟ ಸಲ್ಮಾಳಿಗೆ ಇತ್ತು. ಈ ಕಾಟಕ್ಕೆ ತನ್ನ ಮಗಳನ್ನೇ ಬಲಿ ಪಡೆದುಕೊಂಡಿದ್ದಾರೆ. ಅಳಿಯನ ಕಾಟ ಏನೂ ಇರಲಿಲ್ಲ. ಕೂಲಿ ಮಾಡುತ್ತಿದ್ದ ಆತನಿಗೆ ನಾವೇ ಸಹಾಯ ಮಾಡುತ್ತಿದ್ದೆವು. ನನ್ನ ಮಗಳು ಸಣ್ಣವಳು, ಆಕೆಯಲ್ಲಿ ಚುರುಕುತನ ಇರಲಿಲ್ಲ ಎಂದು ಸಲ್ಮಾ ತಾಯಿ ಆರೋಪಿಸುತ್ತಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ ಸಹ ಭೇಟಿ ನೀಡಿದ್ದರು. ಸದ್ಯ ಎರಡೂ ಶವಗಳನ್ನು ಧಾರವಾಡ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
