BALLARI

ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ?:ನಾಗೇಂದ್ರ ಕಣ್ಣೀರು… ಕರ್ಮದ ಕಣ್ಣೀರಷ್ಟೇ; ಜನಾರ್ದನ ರೆಡ್ಡಿ

Share

ವಾಲ್ಮೀಕಿ ರಾಮಾಯಣದ ಬಗ್ಗೆ ಶಂಭುಕನ ಬಗ್ಗೆ ಮಾತನಾಡುತ್ತೀಯಾ.ರಾಜಕೀಯಕ್ಕೆ ರಾಮಾಯಣ ತರುತ್ತೀಯಾ. ಈ ಬಗ್ಗೆ ನಿನಗೆ ಮಾತನಾಡಲು ಯೋಗ್ಯತೆ ಇಲ್ಲ. ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ? ದಲಿತ ಚಂದ್ರಶೇಖರ್ ಅವರನ್ನು ನೇರವಾಗಿ ಹತ್ಯೆ ಮಾಡಿದ್ದು ನೀವು ಎಂದು ಸಚಿವ ನಾಗೇಂದ್ರ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ವಾಗ್ಧಾಳಿ ನಡೆಸಿದ್ದಾರೆ.

ವಾಲ್ಮೀಕಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ವಿರುದ್ಧ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಲಿಯುಗದ ಶಂಭುಕ ಎಂದೆಲ್ಲಾ ತೀವ್ರ ವಾಗ್ದಾಳಿ ನಡೆಸಿದರು. ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವ ನಾಗೇಂದ್ರ ಅವರ ರಾಜಕೀಯ ಆರಂಭವಾಗಿದ್ದೇ ಬಿಜೆಪಿಯಿಂದ ಎಂದು ನೆನಪಿಸಿದ ಅವರು, ರಾಮಾಯಣ ಹಾಗೂ ಶಂಭುಕನ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ ಎಂದು ಕಿಡಿಕಾರಿದರು. ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿಗಳ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ನಾಗೇಂದ್ರ, ಈಗ ಕಥೆಗಳನ್ನು ಹೇಳಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ತೆಲಂಗಾಣ, ಗೋವಾ ಹಾಗೂ ಬಳ್ಳಾರಿ ಮತ್ತು ಇತರೆಡೆ ಲೋಕಸಭಾ ಚುನಾವಣೆಗೆ ಯಥೇಚ್ಛವಾಗಿ ಬಳಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ ಜನಾರ್ದನ ರೆಡ್ಡಿ, ನೇಹಾ ಮನ್ಸೂರಿ, ಜಾಹದ್ ಮನ್ಸೂರಿ ಹಾಗೂ ಕಲಾಮ್ ಶೇಕೂರ್ ಮನ್ಸೂರಿ ಎಂಬುವವರ ಖಾತೆಗಳಿಗೆ 6 ಕೋಟಿ ರೂಪದಿಗಳಿಗೂ ಅಧಿಕ ಹಣ ವರ್ಗಾವಣೆಯಾಗಿದೆ ಎಂದು ದೂರಿದರು. ಈ ಮೂವರು ಈಗಾಗಲೇ ಬೆಂಗಳೂರು ಸಿಬಿಐ ಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದು, ನಿಗಮದ ಖಾತೆಯಿಂದ ಇವರ ಅಕೌಂಟ್‌ಗೆ ಹಣ ಹೋಗಲು ಕಾರಣವೇನು ಮತ್ತು ಇವರಿಗೂ ನಾಗೇಂದ್ರಗೂ ಇರುವ ಸಂಬಂಧವೇನು ಎಂಬುದನ್ನು ಬಳ್ಳಾರಿಯ ಮುಸ್ಲಿಂ ಬಾಂಧವರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ಹಗರಣದಲ್ಲಿ ಒಟ್ಟು 26 ಆರೋಪಿಗಳಿದ್ದು, ವಾಲ್ಮೀಕಿ ನಿಗಮದ ಹಣದಿಂದಲೇ ಐಷಾರಾಮಿ ಕಾರುಗಳನ್ನು ಖರೀದಿ ಮಾಡಲಾಗಿದೆ ಮತ್ತು ಬಳ್ಳಾರಿ ಜಿಲ್ಲೆಯ 10 ಶಾಸಕರು ಲೋಕಸಭಾ ಚುನಾವಣೆಯಲ್ಲಿ ಈ ಹಣವನ್ನು ಬಳಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು. ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದ್ದು, ಇದರ ವಿರುದ್ಧ ರಾಯಚೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಹಗರಣವನ್ನು ಒಪ್ಪಿಕೊಂಡಿದ್ದು, ನಾಗೇಂದ್ರ ಅವರ ರಾಜೀನಾಮೆ ಕೇವಲ ಆರಂಭವಷ್ಟೇ ಎಂದು ಕಟುವಾಗಿ ನುಡಿದರು.

Tags:

error: Content is protected !!