ನೀರಾವರಿ ಯೋಜನೆಗಾಗಿ ತಮ್ಮ ಜಮೀನು ಕಳೆದುಕೊಂಡ ರೈತರಿಗೆ ಇಂದು ಒಂದು ಪ್ರಶ್ನೆ ಕಾಡುತ್ತಿದೆ… ನೀರಾವರಿ ಯೋಜನೆಗೆ ಭೂಮಿ ನಮ್ಮದು… ಆದರೆ ನೀರಿನ ನಿರ್ಧಾರ ಮಾಡುವ ಸಮಿತಿಯಲ್ಲಿ ನಮ್ಮ ಸ್ಥಾನ ಯಾಕಿಲ್ಲ? ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅಖಂಡ ರಾಜ್ಯ ರೈತ ಸಂಘ ಹಸಿರು ಸೇನೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧ್ವನಿ ಎತ್ತಿದೆ. ನೀರಾವರಿ ಯೋಜನೆಯ ಫಲಾನುಭವಿಗಳಾಗಿರುವ ರೈತರನ್ನೇ ಐಸಿಸಿ ಸಮಿತಿಯಿಂದ ದೂರವಿಡುವುದು ಅನ್ಯಾಯ ಎಂದು ಆರೋಪಿಸಿರುವ ಸಂಘ, ತಕ್ಷಣ ರೈತರಿಗೆ ಸದಸ್ಯತ್ವ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು.. ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಖಂಡ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು, ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಕೃಷ್ಣಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯಲ್ಲಿ ಸದಸ್ಯತ್ವ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಯೋಜನೆಯಿಂದ ನೇರವಾಗಿ ಪರಿಣಾಮ ಕ್ಕೊಳಗಾದ ರೈತರ ಅಭಿಪ್ರಾಯಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ
ಇನ್ನೂ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ನೀರಿನ ಬಳಕೆ, ಬೆಳೆ ನಿರ್ವಹಣೆ, ನೀರಾವರಿ ಸಮಸ್ಯೆಗಳು ಹಾಗೂ ಕಾಲುವೆಗಳ ವಾಸ್ತವ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗಿಂತ ರೈತರಿಗೆ ಹೆಚ್ಚು ಅನುಭವವಿದೆ. ಆದರೂ ರೈತರನ್ನೇ ಸಮಿತಿಯಿಂದ ಹೊರಗಿಡುವುದು ಅತ್ಯಂತ ಅನ್ಯಾಯ. ರೈತರ ಪ್ರತಿನಿಧಿಗಳಿಲ್ಲದ ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರೈತರ ಹಿತಾಸಕ್ತಿಯನ್ನು ಸಮರ್ಪಕವಾಗಿ ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದರು. ಇನ್ನೂ ಭೂಮಿ ಕಳೆದುಕೊಂಡ ರೈತರಿಗೆ ಐಸಿಸಿ ಸಮಿತಿಯಲ್ಲಿ ಸದಸ್ಯತ್ವ ನೀಡುವ ಮೂಲಕ ನೀರಾವರಿ ಯೋಜನೆಗಳ ನಿರ್ಧಾರ ಪ್ರಕ್ರಿಯೆಯಲ್ಲಿ ಅವರಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು. ರೈತರ ಧ್ವನಿಯನ್ನು ಕಡೆಗಣಿಸುವುದು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಮನವಿಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ನೀರಾವರಿ ಯೋಜನೆಗಾಗಿ ಭೂಮಿ ಕೊಟ್ಟ ರೈತರು ಇಂದು ಕೇಳುತ್ತಿರುವ ಪ್ರಶ್ನೆ ಒಂದೇ… “ನಮ್ಮ ಜಮೀನು ಬೇಕಿತ್ತು, ಆದರೆ ನಮ್ಮ ಅಭಿಪ್ರಾಯ ಬೇಡವೇ?” ರೈತರ ಬದುಕಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ರೈತರ ಧ್ವನಿಗೆ ಸ್ಥಾನ ಸಿಗುತ್ತದೆಯೇ, ಅಥವಾ ಮನವಿಗಳು ಕಡತಗಳಲ್ಲೇ ಉಳಿಯುತ್ತವೆಯೇ ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ. ರೈತರ ವಿಶ್ವಾಸವನ್ನು ಗಳಿಸುವ ನಿರ್ಧಾರ ಬರುತ್ತದೆಯೋ, ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
