Uncategorized

*ಶರಣ ಸಾಹಿತ್ಯ ಅಳಿಯದ ಅಮೂಲ್ಯ ಸಂಪತ್ತು; ವಿದ್ಯಾರ್ಥಿಗಳು ವಚನಗಳ ಅಧ್ಯಯನ ಮಾಡಲಿ: ಸಂಗಮೇಶ ಬಬಲೇಶ್ವರ*

Share

ವಿಜಯಪುರ; ಶರಣ ಸಾಹಿತ್ಯವು ಅಳಿಯದ ಅಮೂಲ್ಯ ಸಂಪತ್ತಾಗಿದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವಚನ ಪಿತಾಮಹ ಡಾ. ಪ.ಗು. ಹಳಕಟ್ಟಿಯವರ ಸೇವೆ ಅನನ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಮದಾಪುರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿ. ಶ್ರೀ ಬಾಳಾಸಾಹೇಬಗೌಡ ಪಾಟೀಲರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.


ಶರಣ ಸಾಹಿತ್ಯವನ್ನು ಉಳಿಸುವ ಉದ್ದೇಶದಿಂದ ಡಾ. ಪ.ಗು. ಹಳಕಟ್ಟಿಯವರು ತಮ್ಮ ಮನೆಯನ್ನು ಮಾರಾಟ ಮಾಡಿ ಮುದ್ರಣಾಲಯ ಸ್ಥಾಪಿಸಿ, ಊರೂರು ಹಾಗೂ ಮಠ-ಮಾನ್ಯಗಳನ್ನು ಸುತ್ತಿ ತಾಳೆಗರಿಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಿದ್ದಾರೆ. ಅವರ ಸೇವೆ ಸದಾ ಸ್ಮರಣೀಯವಾಗಿದೆ. ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಸಂಸ್ಕಾರಯುತ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಮದಾಪುರ ವಿರಕ್ತಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಶರಣರ ಚಿಂತನೆಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ಮುತ್ತೇಶ ಗಡ್ಡರಮಠ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಮುಖ್ಯೋಪಾಧ್ಯಾಯ ಬಸವರಾಜ ಗೋಟ್ಯಾಳ ಅವರು ವಚನ ಪಿತಾಮಹ ಡಾ. ಪ.ಗು. ಹಳಕಟ್ಟಿಯವರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಪಿ. ಬಿರಾದಾರ, ಬಿ.ಸಿ. ಸಾರವಾಡ, ಭೀಮರಾಯ ಅಮಜಗೋಳ, ಮಲ್ಲಪ್ಪ ತೊದಲಬಾಗಿ, ಪ್ರಾಚಾರ್ಯೆ ಶ್ರೀಮತಿ ಪಾರ್ವತಿ, ಉಪಪ್ರಾಚಾರ್ಯ ರಾಘವೇಂದ್ರ ಪುರೋಹಿತ, ಶರಣ ಕರಿಕಲ್ಲ, ರಫೀಕ್ ಭಗವಾನ್, ಮಾರುತಿ ಮಾದರ್ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!