Khanapur

ಶಾಲೆಗೆ ಬೇಕು ಶೌಚಾಲಯ ಭಾಗ್ಯ! ಪಿಡಿಒ ನಿಂಗಪ್ಪ ಅಕ್ಸಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ!

Share

ಸರ್ಕಾರದ ಕೆಲಸ ದೇವರ ಕೆಲಸ’ ಎನ್ನುತ್ತಾರಾದರೂ, ಖಾನಾಪುರ ತಾಲೂಕಿನ ಮೆರಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಸ್ಥಿತಿ ನೋಡಿದರೆ ‘ದೇವರು ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎಂಬಂತಾಗಿದೆ! ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಹಲಗಾ ಗ್ರಾಮ ಪಂಚಾಯಿತಿ ಪಿಡಿಒ ನಿಂಗಪ್ಪ ಅಕ್ಸಿ ಅವರ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾನಾಪುರ ತಾಲೂಕಿನ ಮೆರಡಾ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಶೌಚಾಲಯ ಇಲ್ಲದೆ ವಿದ್ಯಾರ್ಥಿನಿಯರು ಹಾಗೂ ಶಾಲಾ ಶಿಕ್ಷಕಿಯರು ತೀವ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಕೇವಲ ನಾಲ್ಕು ಗೋಡೆಗಳನ್ನು ಎಬ್ಬಿಸಿ, ಯಾವುದೇ ಮೂಲಭೂತ ಸೌಕರ್ಯಗಳನ್ನು ಅಳವಡಿಸದೇ ಅರ್ಧಮರ್ಧ ಕಾಮಗಾರಿ ನಡೆಸಿ ಬಿಡಲಾಗಿದೆ. ಪರಿಣಾಮವಾಗಿ, ವಿದ್ಯಾರ್ಥಿಗಳು ಶೌಚಕ್ಕಾಗಿ ಮನೆಗಳಿಗೆ ಅಥವಾ ಕೆರೆ ಪಕ್ಕಕ್ಕೆ ಹೋಗಬೇಕಾದ ದುಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲದೆ ಶಾಲಾ ಆವರಣದಲ್ಲಿರುವ ಬೋರ್‌ವೆಲ್ ಕೂಡ ಕೆಟ್ಟುಹೋಗಿದ್ದು, ಅದನ್ನು ದುರಸ್ತಿ ಮಾಡುವ ಕನಿಷ್ಠ ಸೌಜನ್ಯವನ್ನೂ ಪಂಚಾಯಿತಿ ತೋರಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನೆಯಾಗಿದ್ದು, ಅಹಿತಕರ ಘಟನೆ ಸಂಭವಿಸಿದರೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಈ ಕುರಿತು ಶಾಲಾ ಆವರಣಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ಮಾಜಿ ವಿದ್ಯಾರ್ಥಿ ಹಾಗೂ ಗ್ರಾಮದ ನಿವಾಸಿ ವಿಷ್ಣು ಪಾಟೀಲ, ವಿಡಿಯೋ ಮಾಡಿ ಶಾಲೆಯ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ಹಲಗಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಿಂಗಪ್ಪ ಅಕ್ಸಿ ಅವರ ಗಮನಕ್ಕೆ ತಂದರೂ ಅವರು ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಅರ್ಧಮರ್ಧ ನಿರ್ಮಾಣಗೊಂಡಿರುವ ಈ ಶೌಚಾಲಯ ಪಿಡಿಒ ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ. ಆದ್ದರಿಂದ ಖಾನಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇತ್ರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಂಧೆ ಅವರು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಶಾಲೆಗೆ ತಕ್ಷಣ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags:

error: Content is protected !!