Belagavi

ಬೆಳಗಾವಿಯಲ್ಲಿ ಆಷಾಢ ಏಕಾದಶಿ ಸಂಭ್ರಮ: ಖಡೇಬಝಾರ್ ವಿಠ್ಠಲ ಮಂದಿರದಲ್ಲಿ ಹರಿದುಬಂದ ಭಕ್ತಸಾಗರ!

Share

ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಭಕ್ತಿ ಪರವಶತೆ ಮನೆಮಾಡಿದೆ. ನಗರದ ಐತಿಹಾಸಿಕ ಖಡೇಬಝಾರ್‌ನ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಪಾಂಡುರಂಗನ ದರ್ಶನಕ್ಕಾಗಿ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

ಬೆಳಗಾವಿ ನಗರದ ಪ್ರಸಿದ್ಧ ಹಾಗೂ ಸುಮಾರು 300 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಖಡೇಬಝಾರ್‌ನ ಪಾನಸೆ ಬಂಧುಗಳ ಶ್ರೀ ವಿಠ್ಠಲ-ರುಕ್ಮಿಣಿ ಮಂದಿರದಲ್ಲಿ ಆಷಾಢ ಏಕಾದಶಿ ನಿಮಿತ್ತ ಬೆಳಗಿನ ಜಾವ 4:30ಕ್ಕೆ ಶ್ರೀ ವಿಠ್ಠಲ ಹಾಗೂ ರುಕ್ಮಿಣಿ ಮೂರ್ತಿಗಳಿಗೆ ಜಲಾಭಿಷೇಕ, ಮಹಾಪೂಜೆ ನೆರವೇರಿತು. ವಿಶೇಷ ಪುಷ್ಪಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ದೇವರಿಗೆ ಮಹಾಮಂಗಲಾರತಿ ಮತ್ತು ಮಂತ್ರಪುಷ್ಪಾಂಜಲಿ ಸಲ್ಲಿಸಲಾಯಿತು. ಪೂಜಾ ವಿಧಿವಿಧಾನಗಳ ನಂತರ ಜಗತ್ತಿನ ಹಾಗೂ ಭಾರತದ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಕಲ್ಯಾಣ ಸಿಗಲಿ ಎಂದು ಶ್ರೀ ಪಾಂಡುರಂಗನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬೆಳಗಿನ ಜಾವದಿಂದಲೇ ವಿಠ್ಠಲನ ದರ್ಶನಕ್ಕಾಗಿ ಭಕ್ತಸಾಗರವೇ ಹರಿದು ಬಂದಿದ್ದು, ಭಕ್ತಾದಿಗಳು ಸುದೀರ್ಘ ಸರತಿ ಸಾಲಿನಲ್ಲಿ ನಿಂತು ಅತ್ಯಂತ ಶ್ರದ್ಧಾಭಕ್ತಿಗಳಿಂದ ದೇವರಿಗೈದ ಅಲಂಕಾರ ಕಣ್ಣುಂಬಿಕೊಂಡು ದರ್ಶನ ಪಡೆದರು. ಇಡೀ ದೇವಾಲಯದ ಆವರಣದಲ್ಲಿ “ಜೈ ಹರಿ ವಿಠ್ಠಲ, ಜ್ಞಾನೋಬಾ ತುಕಾರಾಮ” ಎಂಬ ನಾಮಸ್ಮರಣೆ ಮತ್ತು ಭಜನೆಗಳು ಮೊಳಗಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಯೊಬ್ಬ ಭಕ್ತನಿಗೂ ಯಾವುದೇ ತೊಂದರೆಯಾಗದಂತೆ ದೇವಾಲಯ ಮಂಡಳಿಯ ವತಿಯಿಂದ ಸೂಕ್ತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇನ್ನು ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ರಿದ್ಧಿ ವಿಷನ್ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಆರಂಭದಲ್ಲಿ ರಿದ್ಧಿ ವಿಷನ್ ಸಂಚಾಲಕಿ ದಿವಂಗತ ನಿಶಾ ಛಾಬ್ರಿಯಾ ಅವರಿಂದ ಪ್ರಾರಂಭಗೊಂಡ ಈ ಸೇವೆಯ ಪರಂಪರೆಯನ್ನು, ಅವರ ನಿಧನದ ನಂತರವೂ ಪತಿ ನಾಗೇಶ್ ಛಾಬ್ರಿಯಾ ಅವರು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಆಷಾಢ ಏಕಾದಶಿಯ ಈ ಶುಭದಿನದಂದು ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಿ ಪುನೀತರಾದರು.

Tags:

error: Content is protected !!