ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಮಾಧ್ಯಮಕ್ಕಿದೆ. ಪತ್ರಕರ್ತರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಸಾಮಾನ್ಯ ಜನರ ಪರವಾಗಿ ನಿಲ್ಲಬೇಕು. ಯಾರ ತೇಜೋವಧೆಯೂ ಆಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವುದು ಮಾಧ್ಯಮದ ಕರ್ತವ್ಯವಾಗಿದೆ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದರು.


ಮಂಗಳವಾರ ಕಾಗವಾಡದ ಆಚಾರ್ಯ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಅವರು, “ಕುಡಚಿ–ಉಗಾರ, ಜುಗುಳ–ಖಿದ್ರಾಪುರ ಹಾಗೂ ಮುಳವಾಡ–ಚಿಂಚಲಿ ಗ್ರಾಮಗಳ ಮಧ್ಯೆ ಕೃಷ್ಣಾ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆಗಳು ಎಂಟು ವರ್ಷಗಳಾದರೂ ಅಪೂರ್ಣವಾಗಿವೆ. ಹಾಗೆಯೇ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಮಾಧ್ಯಮಗಳು ಜನರ ಮುಂದೆ ತಂದು ಅಧಿಕಾರಿಗಳ ಗಮನ ಸೆಳೆಯಬೇಕು” ಎಂದು ಸಲಹೆ ನೀಡಿದರು.
ಅಥಣಿ ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, “ಕಾಗವಾಡ ಹಾಗೂ ಅಥಣಿ ತಾಲೂಕಿನ ಪತ್ರಕರ್ತರು ಮುಂದಿನ ವರ್ಷದಿಂದ ಪತ್ರಿಕಾ ದಿನಾಚರಣೆಯನ್ನು ಜಂಟಿಯಾಗಿ ಆಚರಿಸಬೇಕು. ಅದರ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ” ಎಂದು ಘೋಷಿಸಿದರು.
ಅಲ್ಲದೆ, “ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ರಾಜು ಕಾಗೆ ಅವರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಬ್ಬರೂ ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಪರಮಾನಂದವಾಡಿ ಬ್ರಹ್ಮಾನಂದ ಮಠದ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ, “ಸಮಾಜದ ಸಮಸ್ಯೆಗಳನ್ನು ಬೆಳಕಿಗೆ ತರುವ ಮಹತ್ವದ ಸೇವೆಯನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಎಲ್ಲ ಪತ್ರಕರ್ತರು ಒಗ್ಗಟ್ಟಿನಿಂದ ಸಮಾಜಸೇವೆ ಮುಂದುವರಿಸುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು” ಎಂದು ಹೇಳಿದರು.
ಕಾಗವಾಡ ತಹಸೀಲ್ದಾರ್ ರವೀಂದ್ರ ಹಾದಿಮನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ ಗಾಣಿಗೇರ ಪತ್ರಿಕಾ ದಿನಾಚರಣೆಯ ಅಂಗವಾಗಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಮಾಳಿ, ತಾಲೂಕು ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ, ಲೋಕೋಪಯೋಗಿ ಇಲಾಖೆ ಅಭಿಯಂತರ ಎಂ.ಎಸ್. ಮಗದುಮ್, ನೀರಾವರಿ ಇಲಾಖೆ ಅಧಿಕಾರಿ ರವೀಂದ್ರ ಮುರುಗಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಿಗರಾಮಯ್ಯ, ಸಿಡಿಪಿಒ ರವೀಂದ್ರ ಗುದ್ಗೇನವರ್, ಆಚಾರ್ಯ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ. ಮುಗದುಮ್, ಎಸ್.ಎಸ್. ಜಮಖಂಡಿ, ಆರ್.ಡಿ. ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಂಚಾಲಕ ಸುಕುಮಾರ್ ಬನ್ನುರೆ, ಅತಿಥಿಗಳನ್ನು ಸ್ವಾಗತಿಸಿದರು.
ತಾಲೂಕು ಅಧ್ಯಕ್ಷ ಸಿದ್ದಯ್ಯ ಹಿರೇಮಠ, ಉಪಾಧ್ಯಕ್ಷ ಪ್ರಭಾಕರ ಗೊಂದಳಿ, ಖಜಾಂಚಿ ಸುರೇಶ್ ಕಾಗಲಿ, ಕಾರ್ಯದರ್ಶಿ ವಿಜಯಮಾಂತೇಶ ಅರಕೇರಿ, ಸಚಿನ್ ಕಾಮಿಡಿ, ಮುರುಗೇಶ್ ಗಸ್ತಿ, ಬಸವರಾಜ ತಾರದಾಳೆ, ಅಮರ್ ಕಾಂಬಳೆ ಸೇರಿದಂತೆ ಅನೇಕ ಪತ್ರಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
