ಖಾನಾಪುರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕಾ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯ ಜಂಟಿ ಸಹಯೋಗದಲ್ಲಿ ಮುಂಗಾರು ಹಂಗಾಮಿನ ಕಾರ್ಯಕ್ರಮಗಳ ಕುರಿತು ಮಹತ್ವದ ಸಭೆ ಜರುಗಿತು. ಶಾಸಕ ವಿಠ್ಠಲ ಹಲಗೇಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ತಾಲೂಕಿನ ಮಳೆ, ಬೆಳೆ ಹಾಗೂ ರೈತರಿಗೆ ವಿತರಿಸಲಾಗುವ ಸೌಲಭ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.


ಸಭೆಯನ್ನುದ್ದೇಶಿಸಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕ ಡಿ. ಬಿ. ಚೌವ್ಹಾಣ್ ಅವರು, ಪ್ರಸಕ್ತ ಸಾಲಿನ ಮಳೆ-ಬೆಳೆ ಪರಿಸ್ಥಿತಿ, ಬಿತ್ತನೆ ಕ್ಷೇತ್ರ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೆಳೆ ಸಮೀಕ್ಷೆ ಹಾಗೂ ಸೂಕ್ಷ್ಮ ನೀರಾವರಿ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕೃಷಿ ಯಂತ್ರೋಪಕರಣಗಳಿಗೆ ಸಿಗುವ ಸಹಾಯಧನ ಹಾಗೂ ‘ಕೆ-ಕಿಸಾನ್’ (K-Kisan) ಆಪ್ ಮೂಲಕ ಯೂರಿಯಾ ರಸಗೊಬ್ಬರ ವಿತರಿಸಲಾಗುತ್ತಿರುವ ವ್ಯವಸ್ಥೆ ಮತ್ತು ಪ್ರತಿಯೊಂದು ಗೊಬ್ಬರ ಅಂಗಡಿಯ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿರುವ ಕುರಿತು ವಿವರಿಸಿದರು. ಸಭೆಯಲ್ಲಿ ತೋಟಗಾರಿಕೆ, ಅರಣ್ಯ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಅಧಿಕಾರಿಗಳ ಕಾರ್ಯವೈಖರಿಯನ್ನು ಶಾಸಕ ವಿಠ್ಠಲ ಹಲಗೇಕರ ಶ್ಲಾಘಿಸಿದರಲ್ಲದೆ, ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬ ರೈತನಿಗೂ ತಲುಪುವಂತೆ ಕೆಲಸ ಮಾಡಲು ಕಟ್ಟುನಿಟ್ಟಿನ ಸಲಹೆ ನೀಡಿದರು.
ಸಭೆಯಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳು, ಪ್ರಗತಿಪರ ರೈತರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
