KHANAPUR

ಖಾನಾಪುರ: ಒಲಿಂಪಿಯಾಡ್ ಸಾಧಕರಿಗೆ ಸನ್ಮಾನ; ಗ್ರಾಮ ಪಂಚಾಯತ್ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಲು ಪಿಡಿಓ ಸಾಗರಕುಮಾರ ಕರೆ!

Share

ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿ ಪಡೆದ ನಂದಗಡದ ಬಸಪ್ಪಣ್ಣ ಅರಗಾವಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಿಗೆ ನಂದಗಡ ಗ್ರಾಮ ಪಂಚಾಯಿತಿ ಪಿಡಿಒ ಸಾಗರಕುಮಾರ ಬಿರಾದಾರ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು, ಮುಂದೆಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸಿದರು.


ಶಾಲೆಯಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದ ಪಿಡಿಓ ಸಾಗರಕುಮಾರ ಬಿರಾದಾರ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್ ಸೇರಿದಂತೆ ವಿವಿಧ ಶೈಕ್ಷಣಿಕ ಸ್ಪರ್ಧೆಗಳು ವಿದ್ಯಾರ್ಥಿಗಳ ಸಾಮರ್ಥ್ಯ ಅನಾವರಣಗೊಳಿಸಲು ಸುವರ್ಣ ಅವಕಾಶಗಳಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂತಹ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಇದೇ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಂದಗಡ ಗ್ರಾಮ ಪಂಚಾಯತ್ ವತಿಯಿಂದ ಡಿಜಿಟಲ್ ಲೈಬ್ರರಿ ಹಾಗೂ ಬೀಕನ್ ಲೈಬ್ರರಿ ಸ್ಥಾಪಿಸಲಾಗಿದ್ದು, ಇಲ್ಲಿ 10,000ಕ್ಕೂ ಅಧಿಕ ಪುಸ್ತಕಗಳು ಲಭ್ಯವಿವೆ. ಜೊತೆಗೆ ಆಧುನಿಕ ಅಧ್ಯಯನಕ್ಕಾಗಿ ಗಣಕಯಂತ್ರಗಳು ಹಾಗೂ ಟ್ಯಾಬ್ಲೆಟ್‌ಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.


ಪುಟ್ಟಾಣಿಗಳ ಸ್ವಾಗತ ನೃತ್ಯದೊಂದಿಗೆ ಆರಂಭವಾದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಗಡ ಗ್ರಾಮದ ಹಿರಿಯ ಎನ್.ಆರ್.ಇ. ಸಂಸ್ಥೆಯ ಅಧ್ಯಕ್ಷರಾದ ಸಿ.ಜಿ.ವಾಲಿ ಅವರು ವಹಿಸಿದ್ದರು. ಸುಮಾರು ನೂರು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದು, ಅವರಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ಮುಂದೆಯೂ ತಮ್ಮ ಸಹಕಾರ ಇರುವುದಾಗಿ ತಿಳಿಸಿದರು. ತದನಂತರ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಜರುಗಿತು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ನೇಹಾ ದಲಾಲ, ಶಿಕ್ಷಕಿಯರಾದ ಗಂಗಾ ಡಿನ್ನಿಮಠ, ರಿಹಾನಾ ಶಿಂದೋಳ್ಳಿ, ಅನುರಾಧಾ ಗೌಡ, ಕೋಮಲ್ ಪಾಟೀಲ್, ಶಾಬಾಜ್ ತಾಂಬಡಿ, ನಾಜ್ರಿನ್ ಚಂದಕನವರ, ಗಾಯತ್ರಿ ಗೌಡ ಸೇರಿದಂತೆ ಮಹಮ್ಮದ್ ಶಫೀ ಖಾಜಿ, ಮಹಾಂತೇಶ ವಾಲಿ, ಎ.ಎಂ.ಕೋಟಿ, ಪಿ.ಕೆ.ಪಾಟೀಲ ಹಾಗೂ ಪತ್ರಕರ್ತರಾದ ಅಪ್ಪಾಜಿ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!