Khanapur

38 ವರ್ಷಗಳ ಸುದೀರ್ಘ ಸೇವೆ: ಪ್ರಧಾನ ಗುರು ಸಾಧಿಕಲಿ ಬಾಗವಾನ್ ಅವರಿಗೆ ರಾಜ ಮರ್ಯಾದೆಯ ಭವ್ಯ ಬೀಳ್ಕೊಡುಗೆ!

Share

ಖಾನಾಪುರ ತಾಲ್ಲೂಕಿನ ಗಂದಿಗವಾಡ ಗ್ರಾಮದ ನಿವಾಸಿ ಹಾಗೂ ಹಿರೇ ಅಂಗರಹಳ್ಳಿ ಸರಕಾರಿ ಕನ್ನಡ ಶಾಲೆಯ ಪ್ರಧಾನ ಗುರುಗಳಾದ ಸಾಧಿಕಲಿ ಹುಸೇನ್ ಸಾಬ್ ಬಾಗವಾನ್ ಅವರು ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ್ದಾರೆ. ಇಟಗಿ ಗ್ರಾಮದ ಗಣೇಶ ಕಲ್ಯಾಣ ಮಂಟಪದಲ್ಲಿ ಶಿಕ್ಷಕ ವೃಂದ, ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸತ್ಕಾರ ಸಮಾರಂಭದಲ್ಲಿ ಜನಪ್ರಿಯ ಶಾಸಕ ವಿಠ್ಠಲ್ ಹಲಗೆಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ನಿವೃತ್ತ ಅಧಿಕಾರಿಗೆ ರಾಜ ಮರ್ಯಾದೆಯ ಭವ್ಯ ವಿದಾಯ ಕೋರಿದರು.

ಬೃಹತ್ ಸತ್ಕಾರ ಸಮಾರಂಭವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ವಿಠ್ಠಲ್ ಹಲಗೆಕರ್ ಅವರು, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಸಾಧಿಕಲಿ ಬಾಗವಾನ್ ಅವರು ತಮ್ಮ ವಿದ್ವತ್ತನ್ನು ಧಾರೆ ಎರೆದು ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಜನಮೆಚ್ಚಿದ ಶಿಕ್ಷಕರಾಗಿದ್ದಾರೆ ಎಂದರು. ನಿವೃತ್ತ ಪ್ರಾಧ್ಯಾಪಕ ಪಿ ವೈ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯೇ ಗುರುವಿಗೆ ಸಿಗುವ ಬಹುದೊಡ್ಡ ಸನ್ಮಾನ ಎಂದರು. ನಿವೃತ್ತ ಶಿಕ್ಷಕರ ಸಹೋದರ ನಜೀರ್ ಬಾಗವಾನ ಮಾತನಾಡಿ, ಪಾಲಕರಾದ ಹುಸೇನ್ ಸಾಬ್ ಹಾಗೂ ಖೈರು ನಿಸಾ ಅವರು ಹಾಕಿಕೊಟ್ಟ ಶಿಸ್ತಿನ ಮಾರ್ಗವೇ ಸಾಧಿಕ್ ಅವರ ಯಶಸ್ಸಿಗೆ ಕಾರಣವಾಗಿದ್ದು, ಅವರ ಧರ್ಮಪತ್ನಿ ಶರಪುನ್ನಿಸ (ಶರ್ಪುನಿಸ) ಅವರು ಯಾವುದೇ ಸಂಭಾವನೆ ಪಡೆಯದೇ ಉಚಿತವಾಗಿ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಶ್ರಮಿಸಿದ್ದಾರೆ ಎಂದರು. ಶಿಕ್ಷಣ ಅಧಿಕಾರಿ ಮಹದೇವ ಮೇದಾರ್, ಬಿಜೆಪಿ ಮುಖಂಡ ಬಸವರಾಜ್ ಸಾನಿಕೊಪ್ಪ ಹಾಗೂ ಸಿಪಿಐ ಮಂಜುನಾಥ್ ಹಿರೇಮಠ್ ಅವರು ಸಾಧಿಕಲಿ ಅವರ ಕಪ್ಪುಚುಕ್ಕೆಯಿಲ್ಲದ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರಾಜು ಘೋಷಾನೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು, ಶ್ರೀ ಚನ್ನಬಸವ ದೇವರು ಹಾಗೂ ಶ್ರೀ ಯಾಸೀನ ಮೌಲಾನ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ನಾಗೇಶ್ ಮಾದಿಗರ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಮಂಜುನಾಥ್ ಶೆಟ್ಟನ್ನವರ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ನಾಶಿರ್ ಬಾಗವಾನ, ಗಂದಿಗವಾಡ ಮುಸ್ಲಿಂ ಜಮಾತ್ ಅಧ್ಯಕ್ಷ ಗೌಸ್ ಬಾಗವಾನ, ಆರ್ ಸಿ ಪಾಟೀಲ್, ಎಸ್ ಜಿ ಕುಲಕರಣಿ, ಅಶೋಕ್ ಮೂಲಿಮನಿ, ವೀರೇಶ್ ಕಂಬಳಿ, ಪ್ರಭು ಹಂಗರಕಿ, ಸುನಿಲ್ ಮಡ್ಡಿಮನಿ, ಬಾಬು ಮಾಡಾಕರ್, ರವಿ ಬೇಕಾನಿ, ಬಿಎಂ ಉಳ್ಳಾಗಡ್ಡಿ, ಶೋಕತಲಿ ಬಿಚ್ಚುನವರ್ ಮತ್ತು ಎಂ ಎನ್ ಹತ್ತಿ ಉಪಸ್ಥಿತರಿದ್ದರು. ಕೊನೆಯಲ್ಲಿ ಶಿಕ್ಷಕ ವೃಂದ ಹಾಗೂ ಅಭಿಮಾನಿಗಳಿಂದ ಸಾಧಿಕಲಿ ಮತ್ತು ಅವರ ಧರ್ಮಪತ್ನಿ ಶರ್ಪುನಿಸ ಅವರಿಗೆ ಭವ್ಯ ಸತ್ಕಾರ ಜರುಗಿತು.

Tags:

error: Content is protected !!