Uncategorized

KEA ವಿರುದ್ಧ ಧಾರವಾಡ ಕೃಷಿ ವಿವಿ ವಿದ್ಯಾರ್ಥಿಗಳ ಆಕ್ರೋಶ: ನೇಮಕಾತಿ ನಿಯಮಕ್ಕೆ ತೀವ್ರ ವಿರೋಧ!

Share

ಕೆಇಎ (KEA) ಪ್ರಕಟಿಸಿರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಅವಕಾಶ ನೀಡಿರುವುದನ್ನು ಖಂಡಿಸಿ ಹಾಗೂ ಅದನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿ, ಧಾರವಾಡದಲ್ಲಿ ಇಂದು ಕೃಷಿ ವಿವಿ ವಿದ್ಯಾರ್ಥಿಗಳು ಬೀದಿಗಿಳಿದು ಕೆಇಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಕೃಷಿ ವಿವಿಯ ಆಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕೆಇಎ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಕೃಷಿ ಪದವೀಧರರಿಗೆ ಮಾತ್ರ ಸೀಮಿತವಾಗಬೇಕು. ಆದರೆ ಕೆಇಎ ಈಗ ಬಯೋಟೆಕ್ನಾಲಜಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಿರುವುದು ಸರಿಯಲ್ಲ. ಕೆಇಎ ಒಟ್ಟು 945 ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದ್ದು, ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಖಂಡನೀಯವಾಗಿದೆ.

ಕೃಷಿ ವಿದ್ಯಾರ್ಥಿಗಳು ರಾವೆ (RAWE), ಬೇಸಾಯಶಾಸ್ತ್ರ, ಕೀಟಶಾಸ್ತ್ರ, ಸಸ್ಯರೋಗಶಾಸ್ತ್ರ ಸೇರಿದಂತೆ ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಆದರೆ, ಇದೇ ಹುದ್ದೆಗಳಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ ರೈತರಿಗೆ ಸೂಕ್ತ ತಾಂತ್ರಿಕ ಮಾರ್ಗದರ್ಶನ ಸಿಗದೆ ಸಮಸ್ಯೆಯಾಗಬಹುದು. ಅಲ್ಲದೆ, ಕೃಷಿ ವಿಶ್ವವಿದ್ಯಾಲಯದ ಮಾನ್ಯತೆ ಇಲ್ಲದ ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅವಕಾಶ ನೀಡಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೂಡಲೇ ನಿಗದಿಪಡಿಸಿರುವ ಪರೀಕ್ಷೆಯ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ವಿದ್ಯಾರ್ಥಿಗಳು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!