Chikkodi

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ರೈತ ಸಂಘಟನೆಯಿಂದ ಮನವಿ

Share

ರೈತರ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಘಟಕದ ಪದಾಧಿಕಾರಿಗಳು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೂಳಿ ಗ್ರಾಮದಲ್ಲಿ ಮನವಿ ಪತ್ರ ಸಲ್ಲಿಸಿದರು.

ಗ್ರಾಮದ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಸದರ ಗಮನ ಸೆಳೆದ ರೈತ ಮುಖಂಡರು, ನಾಗರಮುನ್ನೂಳಿ ಗ್ರಾಮದ ತೋಟದ ಪಟ್ಟಿಗಳಲ್ಲಿ ವಾಸಿಸುತ್ತಿರುವ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಹತ್ತಿರ ಹರಿಯುವ ಹಿರಣ್ಯಕೇಶಿ ನದಿಯಿಂದ ಚಿಕ್ಕೋಡಿ ಸಿಬಿಸಿ ಉಪಕಾಲುವೆಗೆ ಲಿಫ್ಟ್ ಮುಖಾಂತರ ನೀರು ಹರಿಸಬೇಕು. ತದನಂತರ ಕೋಟಬಾಗಿ ಏತ ಕಾಲುವೆಯಿಂದ ಕರಗಾಂವ, ಡೊಣವಾಡ, ಬೆಳಕೂಡ ಹಾಗೂ ನಾಗರಮುನ್ನೋಳಿ ಗ್ರಾಮಗಳ ಕೆರೆ ಮತ್ತು ಜಮೀನುಗಳಿಗೆ ನೀರು ಹರಿಸುವ ಮೂಲಕ ಈ ಭಾಗದ ರೈತರ ಹಾಗೂ ಸಾರ್ವಜನಿಕರ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲೂಕಾಧ್ಯಕ್ಷ ಮನೋಜ ‌ಮನಗೂಳಿ ಅವರು ಈ ಭಾಗದ ರೈತರು ಮತ್ತು ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಅತ್ಯಂತ ಗಂಭೀರವಾಗಿದ್ದು, ಸಂಸದರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಡಬೇಕು ಎಂದು ವಿನಂತಿಸಿದರು. ಮನವಿ ಸ್ವೀಕರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು, ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ‌ ಮನಗೂಳಿ, ಮಲ್ಲಪ್ಪ ನಾಗರಾಳೆ, ಸತ್ಯಗೌಡ ಬಸಗೌಡನ್ಮನವರ, ಶಂಕರ ಪಡೇದ, ರವಿ ಕುಂಭೂಜೆ, ಇಮಾಮ ಮುಲ್ತಾನಿ, ವಿಠ್ಠಲ ಕೊಕನೂರ, ರಾಘು‌ ಸಾವಕಾರ ಸೇರಿದಂತೆ ಮುಂತಾದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!