ಕಳೆದ ಐದು ವರ್ಷಗಳಿಂದ ದೂಧಗಂಗಾ ನದಿ ಪ್ರವಾಹದಿಂದಾಗಿ ಭೋಜ್, ಕಾರದಗಾ ಮತ್ತು ಭೋಜವಾಡಿ ಗ್ರಾಮಗಳ ರೈತರ ಜಮೀನುಗಳು ಜಲಾವೃತಗೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗುತ್ತಿದ್ದರೂ, ಸರ್ಕಾರ ಇದುವರೆಗೆ ರೈತರಿಗೆ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಜೈ ಕಿಸಾನ್ ರೈತ ಸಂಘಟನೆಯ ಅಧ್ಯಕ್ಷ ರಮೇಶ್ ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ದೂಧಗಂಗಾ ನದಿ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂರಾರು ರೈತರ ಹೋರಾಟದಲ್ಲಿ ಅವರು ಮಾತನಾಡಿದರು.
ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೂಧಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಸೋಯಾ,ಅವರೆ, ಮೆಣಸು, ತಂಬಾಕು ಹಾಗೂ ನೆಲಗಡಲೆ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. ಪ್ರಸಕ್ತ ವರ್ಷದಲ್ಲೇ ಸುಮಾರು 500ಕ್ಕೂ ಹೆಚ್ಚು ರೈತರ ಜಮೀನಿನ ಬೆಳೆಗಳು ಜಲಾವೃತಗೊಂಡಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಎಂದು ರಮೇಶ ಪಾಟೀಲ ವಿಷಾದಿಸಿದರು.

ಸರ್ಕಾರ ತಕ್ಷಣವೇ ಜಲಾವೃತಗೊಂಡ ಬೆಳೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರೈತ ಸಂಘಟನೆಯ ಅಧ್ಯಕ್ಷರಾದ ಚುನಪ್ಪಾ ಪೂಜಾರಿ ಹಾಗೂ ಸ್ವಾಭಿಮಾನಿ ರೈತ ಸಂಘಟನೆಯ ಅಧ್ಯಕ್ಷರಾದ ರಾಜು ಶೆಟ್ಟಿ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.
ರೈತ ಮುಖಂಡ ಶಿವುಗೊಂಡ ಪಾಟೀಲ ಮಾತನಾಡಿ ಸರ್ಕಾರದ ತಾರತಮ್ಯ ನೀತಿಯನ್ನು ತೀವ್ರವಾಗಿ ಖಂಡಿಸಿದರು.ಪ್ರತಿ ವರ್ಷ ಪ್ರವಾಹ ಬಂದಾಗ ಅಧಿಕಾರಿಗಳು ಕೇವಲ ನೆಪಮಾತ್ರಕ್ಕೆ ಬಂದು ಸರ್ವೆ ಮಾಡಿಕೊಂಡು ಹೋಗುತ್ತಾರೆ. ಆದರೆ ರೈತರ ಕೈಗೆ ಒಂದೂ ರೂಪಾಯಿ ಪರಿಹಾರ ತಲುಪುತ್ತಿಲ್ಲ.
ಪ್ರತಿ ವರ್ಷ ಸುಮಾರು 500ಕ್ಕೂ ಹೆಚ್ಚು ರೈತರ 60 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಬೆಳೆದ ಕಬ್ಬು ಹಾಗೂ ಸೋಯಾ,ಅವರೆ ಬೆಳೆಗಳು ನೀರು ಪಾಲಾಗುತ್ತಿವೆ.
ಮಾರುಕಟ್ಟೆಯಲ್ಲಿ ಹೆಣ್ಣುಮಕ್ಕಳ ತಲೆ ಕೂದಲಿಗೆ ಪ್ರತಿ ಕೆಜಿಗೆ 5,000 ರೂಪಾಯಿ ಬೆಲೆಯಿದೆ. ಆದರೆ ದೇಶಕ್ಕೆ ಅನ್ನ ನೀಡುವ ರೈತ ಕಷ್ಟಪಟ್ಟು ಬೆಳೆದ ಕಬ್ಬಿಗೆ ಕೇವಲ 3 ರೂಪಾಯಿ ಸಿಗುತ್ತಿದೆ. ಇದು ಎಲ್ಲಿಯ ನ್ಯಾಯ?” ಎಂದು ಅವರು ತೀವ್ರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶೀತಲ ಬಾಗೆ ಹಾಗೂ ಡುಂಡಪ್ಪ ನಾಗರಾಳೆ ಅವರು ಮಾತನಾಡಿ ರೈತರ ಹಕ್ಕುಗಳಿಗಾಗಿ ಧ್ವನಿ ಎತ್ತಿದರು.ಈ ಸಂದರ್ಭದಲ್ಲಿ ಜಿತೇಂದ್ರ ಟಾಕಳೆ, ಬಾಳು ಯಾದವ, ಅಮೋಲ್ ಟಾಕಳೇ, ಅಭಯ್ ಪಾಟೀಲ, ಪ್ರಕಾಶ ಗೆಬೀಸೇ, ಸಿದ್ಧಾರ್ಥ ನಾಯಕ, ಮನೋಜ ಕೋನಾಪನವರ, ಸಂಜಯ ಮಾಳಿ, ರಾಮಚಂದ್ರ ಮತ್ತಿವಾಡೆ ಸೇರಿದಂತೆ ಭೋಜ್, ಭೋಜವಾಡಿ ಹಾಗೂ ಬೇಡಕಿಹಾಳ ಗ್ರಾಮಗಳ ನೂರಾರು ಸಂತ್ರಸ್ತ ರೈತರು ಉಪಸ್ಥಿತರಿದ್ದರು.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ.
