Belagavi

ಹಿಡಕಲ್ ಜಲಾಶಯದ ಭೂ ಸಂತ್ರಸ್ತರಿಂದ ದನಕರುಗಳೊಂದಿಗೆ ಬೃಹತ್ ಪ್ರತಿಭಟನೆ; ಒಂದು ವರ್ಷವಾದರೂ ಇಲ್ಲೇ ಧರಣಿ ನಡೆಸ್ತೇವೆ..

Share

ಹಿಡಕಲ್ ಜಲಾಶಯದ ಭೂ ಸಂತ್ರಸ್ತರ ಹೋರಾಟ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಿಗಳ ವಿಳಂಬ ನೀತಿ ಹಾಗೂ ಕೋಟ್ಯಂತರ ರೂಪಾಯಿ ಲಂಚದ ಬೇಡಿಕೆಯನ್ನು ಖಂಡಿಸಿ ನೂರಾರು ರೈತರು ದನಕರುಗಳೊಂದಿಗೆ ರಸ್ತೆಗಿಳಿದು ಬೃಹತ್ ಧರಣಿ ನಡೆಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಭೂಮಿ ನೀಡಿದ ಭೂ ಸಂತ್ರಸ್ತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ರೈತರು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ದನಕರುಗಳೊಂದಿಗೆ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು. ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಾರ್ಯಾಲಯದ ಅಧಿಕಾರಿಗಳ ವಿಳಂಬ ನೀತಿ ಮತ್ತು ಕೋಟ್ಯಂತರ ರೂಪಾಯಿ ಲಂಚದ ಬೇಡಿಕೆಯನ್ನು ತೀವ್ರವಾಗಿ ಖಂಡಿಸಿದ ರೈತರು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ನಂತರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ರೈತ ಮುಖಂಡ ಬಾಳೇಶ್ ಮಾವನೂರ್ ಮಾತನಾಡಿ, “ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹತ್ತಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಿದ್ದರೂ, ನೀರಾವರಿ ನಿಗಮದ ಅಧಿಕಾರಿಗಳಾದ ರಾಜೇಶ್ ಅಮ್ಮಿನಭಾವಿ, ರಾಥೋಡ್, ಲಾಳೂರ ಹಾಗೂ ಪಟೇಲ್ ಮತ್ತಿತರರು ಸಚಿವರಿಗೂ ತಪ್ಪು ಮಾಹಿತಿ ನೀಡುತ್ತಾ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ನೂರಾರು ಎಕರೆ ಜಮೀನಿನ ಪರಿಹಾರ ನನೆಗುದಿಗೆ ಬಿದ್ದಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟವಿಲ್ಲ, ಕೇವಲ ನೀರಾವರಿ ನಿಗಮದ ಭ್ರಷ್ಟ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ. ಕೇವಲ 90% ದಾಖಲೆಗಳು ಎಸ್‌ಎಲ್‌ಓ ಕಾರ್ಯಾಲಯದಲ್ಲಿದ್ದರೂ, ಅಧಿಕಾರಿಗಳು ನಮಗೆ ತಪ್ಪು ರಿಪೋರ್ಟ್ ನೀಡಿ ವಂಚಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಕ್ತ ಮನವಿ ಸಲ್ಲಿಸಿ, ಅಗತ್ಯಬಿದ್ದರೆ ಒಂದು ವರ್ಷವಾದರೂ ಇಲ್ಲೇ ಧರಣಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ,” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಈ ವೇಳ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ದನುಕರುಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ಧರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಪ್ರಸ್ತುತ ಸಮಸ್ಯೆಯ ಪರಿಹಾರಕ್ಕಾಗಿ ಇಂದು ನೀರಾವರಿ ನಿಗಮ ನಿಯಮಿತದ ಉತ್ತರ ವಲಯ ಮುಖ್ಯ ಇಂಜಿನಿಯರ್ ಅವರನ್ನು ತಮ್ಮ ಕಚೇರಿಗೆ ಕರೆಯಿ ವಿಶೇಷ ಸಭೆಯನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ರೈತರ ಅಥವಾ ಪ್ರತಿಭಟನಾಕಾರರ 4 ರಿಂದ 5 ಪ್ರಮುಖ ಮುಖಂಡರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.


ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಉತ್ತರಗಳು ಹಾಗೂ ಅದಕ್ಕೆ ಆಧಾರವಾಗಿರುವ ದಾಖಲೆಗಳನ್ನು ಮುಖಂಡರ ಸಮ್ಮುಖದಲ್ಲೇ ಪರಿಶೀಲಿಸಲಾಗುವುದು ಮತ್ತು ಪ್ರತಿಭಟನಾಕಾರರ ಪ್ರಕಾರ ಆ ವರದಿಯಲ್ಲಿ ಯಾವ ಕೊರತೆಗಳಿವೆ ಎಂಬುದನ್ನು ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಹಾಗೂ ಅಗತ್ಯ ಬಿದ್ದರೆ ತಮ್ಮ ಕಡೆಯಿಂದಲೂ ಸರ್ಕಾರಕ್ಕೆ ಪ್ರತ್ಯೇಕ ವರದಿಯನ್ನು ಕಳುಹಿಸಲು ಸಿದ್ಧರಿರುವುದಾಗಿ ತಿಳಿಸಿದ್ದು, ಸಂಜೆಯ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.

Tags:

error: Content is protected !!