ಗಡಿನಾಡಿನ ಅತ್ಯಂತ ಪ್ರಸಿದ್ಧ ಹಾಗೂ ಧಾರ್ಮಿಕ ಇತಿಹಾಸ ಹೊಂದಿರುವ ಬೆಳಗಾವಿಯ ವಡಗಾಂವ್ನ ಗ್ರಾಮದೇವತೆ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರೋತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಶುಕ್ರವಾರ ಸಾಯಂಕಾಲ ದೇವಿಗೆ ಸಾಂಪ್ರದಾಯಿಕ ‘ವಾರ’ ಬಿಡುವ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಭಕ್ತಿಭಾವದ ವಾತಾವರಣದಲ್ಲಿ ನೆರವೇರಿದ್ದು, ಇಡೀ ವಡಗಾಂವ್ ಪರಿಸರದಲ್ಲಿ ಹಬ್ಬದ ಕಳೆ ಮನೆ ಮಾಡಿದೆ.

ಗಡಿನಾಡು ಬೆಳಗಾವಿ ಮಾತ್ರವಲ್ಲದೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಲಕ್ಷಾಂತರ ರೈತರು, ಕಾರ್ಮಿಕರು ಮತ್ತು ಸಾರ್ವಜನಿಕ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಮಂಗಾಯಿ ದೇವಿ ಜಾತ್ರೋತ್ಸವದ ಪೂರ್ವಭಾವಿ ಧಾರ್ಮಿಕ ಆಚರಣೆಗಳು ಆರಂಭಗೊಂಡಿವೆ. ಶುಕ್ರವಾರ ‘ವಾರ’ ಬಿಡುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮುಂದಿನ ಒಂದು ತಿಂಗಳ ಪವಿತ್ರ ಕಾಲಾವಧಿ ಆರಂಭವಾಗಿದ್ದು, ಈ ಅವಧಿಯಲ್ಲಿ ದೇವಿಗೆ ತೆಂಗಿನಕಾಯಿ ಒಡೆಯುವುದು ಹಾಗೂ ಉಡಿ ತುಂಬುವುದನ್ನು ನಿಷೇಧಿಸುವ ನೂರಾರು ವರ್ಷಗಳ ಪುರಾತನ ಪರಂಪರೆಯನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ಪಾಲಿಸುತ್ತಿದ್ದಾರೆ. ಜಾತ್ರೆಗೂ ಮುನ್ನ ಒಟ್ಟು ಒಂಬತ್ತು ಮಂಗಳವಾರ ಮತ್ತು ಶುಕ್ರವಾರಗಳಂದು ಮಂಗಾಯಿ ದೇವಿ ಮಂದಿರದಲ್ಲಿ ವಿಶೇಷ ಪೂಜೆ, ಆರತಿ ಹಾಗೂ ಮಹಾಧಾರ್ಮಿಕ ಕೈಂಕರ್ಯಗಳು ಜರುಗಲಿದ್ದು, ಭಕ್ತ ಸಾಗರ ಹರಿದುಬರಲಿದೆ.
ಇನ್ನು ಜಗತ್ಪ್ರಸಿದ್ಧ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಮುಂಬರುವ ಆಗಸ್ಟ್ 11 ರಂದು ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ. ಅಂದು ಬೆಳಗ್ಗೆ 11 ರಿಂದ 12 ಗಂಟೆಯ ಶುಭ ಮುಹೂರ್ತದಲ್ಲಿ ಭಕ್ತರ ಸಮ್ಮುಖದಲ್ಲಿ ಪ್ರಮುಖ ಧಾರ್ಮಿಕ ವಿಧಿಯಾದ ‘ಗಾರ್ಹಾಣೆ ಇಳಿಸುವ’ ಮಹಾಸೋಹಳ ಜರುಗಲಿದ್ದು, ತದನಂತರವೇ ಅಧಿಕೃತವಾಗಿ ಜಾತ್ರೆಗೆ ಚಾಲನೆ ಸಿಗಲಿದೆ. ಈ ಜಾತ್ರೆಯ ಮತ್ತೊಂದು ಪ್ರಮುಖ ವಿಶೇಷತೆಯೆಂದರೆ ವಿವಿಧ ಭಾಗಗಳಿಂದ ಆಗಮಿಸುವ ಕುಮಾರಿ ಕನ್ಯೆಯರು ದೇವಿಗೆ ಪವಿತ್ರ ಜಲವನ್ನು ಅರ್ಪಿಸುವುದು. ಈ ಬಾರಿ ಕನ್ಯೆಯರನ್ನು ಪ್ರೋತ್ಸಾಹಿಸುವ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಮಂಗಾಯಿ ದೇವಿ ಮಂದಿರ ಸಮಿತಿಯ ವತಿಯಿಂದ ಎಲ್ಲಾ ಕುಮಾರಿಕೆಯರಿಗೆ ಉಚಿತ ಶೈಕ್ಷಣಿಕ ಸಾಹಿತ್ಯ ಹಾಗೂ ಪರಿಕರಗಳನ್ನು ವಿತರಿಸಲಾಗುತ್ತಿದೆ.
ಸದ್ಯ ಭಕ್ತರ ಸುಗಮ ದರ್ಶನಕ್ಕಾಗಿ ಮಂದಿರ ಸಮಿತಿ, ವಡಗಾಂವ್ ಗ್ರಾಮಸ್ಥರು ಹಾಗೂ ಸ್ವಯಂಸೇವಕರು ಜಂಟಿಯಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.
