ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಬೈಲಹೊಂಗಲ ನಗರದಲ್ಲಿ ವಿವಿಧ ಇಲಾಖೆಗಳು ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬೃಹತ್ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ತಂಬಾಕು ಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ಮೂಡಿಸಲಾಯಿತು.


ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಬೈಲಹೊಂಗಲದ ಎಸ್. ಎಸ್. ವಿ. ವಿ. ಸಂಸ್ಥೆಯ ಎಸ್. ಜಿ. ವಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೌರವಾನ್ವಿತ ಪ್ರಾಂಶುಪಾಲರಾದ ಡಾ. ಸುಭಾಸ ಬಾಗಡೆ ಹಾಗೂ ಬೈಲಹೊಂಗಲ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್. ಎಸ್. ಸಿದ್ದನ್ನವರ ಅವರು ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಹೊರಟ ಪಥಸಂಚಲನವು ಪ್ರಮುಖ ಘೋಷವಾಕ್ಯಗಳೊಂದಿಗೆ ಚನ್ನಮ್ಮ ವೃತ್ತದವರೆಗೆ ಸಾಗಿತು. ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾರ್ವಜನಿಕರ ಗಮನ ಸೆಳೆಯುವಂತಹ ಅದ್ಭುತ ಬೀದಿ ನಾಟಕವನ್ನು ಪ್ರದರ್ಶಿಸಿ ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮವನ್ನು ಜಿಲ್ಲಾ ಮತ್ತು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಹಾಗೂ ಎಸ್. ಜಿ. ವಿ. ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳ ಸಂಯೋಗದೊಂದಿಗೆ ಯಶಸ್ವಿಯಾಗಿ ನಡೆಸಿಕೊಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಮಾನೆ ಅವರು ತಂಬಾಕು ನಿಷೇಧದ ಕಾಯಿದೆ ಮತ್ತು ನಿಯಮಗಳ ಕುರಿತು ಸುದೀರ್ಘವಾಗಿ ವಿವರಿಸಿದರು. ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿಗಳಾದ ದತ್ತಾತ್ರೇಯ ಜೇಂಢಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಆಯುರ್ವೇದ ಮಹಾವಿದ್ಯಾಲಯದ ಪ್ರಮುಖರಾದ ಡಾ. ಜಗದೀಶ ಗಿರಿತಮ್ಮನ್ನವರ, ಡಾ. ವೆಂಕಟೇಶ ನಾಯಕ, ಡಾ. ಸುರೇಖಾ ಖೋತ, ಡಾ. ಜಗದೀಶ ಅರಳಿಕಟ್ಟಿ, ಡಾ. ಪ್ರಶಾಂತ ಬಂಡಿ, ಈ. ಬಸನಾಯ್ಕ, ರುದ್ರನಾಯ್ಕರ, ಡಾ. ಸುಷ್ಮಾ ಮಾರಿಹಾಳ, ಡಾ. ಶರತ ಮಡಿವಾಳರ, ಡಾ. ನಾಗರಾಜ ಮಡ್ಡಿಮನಿ, ಆದರ್ಶ ಹೆಚ್. ಎಸ್., ಡಾ. ತೃಪ್ತಿ ಹೊಸಮನಿ, ಶ್ರೀ ಜಯರಾಮ, ಡಾ. ಚಹನಾ, ಡಾ. ಶಿಲ್ಪಾ ನಾಗನೂರ ಹಾಗೂ ಡಾ. ಜ್ಯೋತಿ ಸೇರಿದಂತೆ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಎನ್. ಎಸ್. ಎಸ್. ಅಧಿಕಾರಿ ಡಾ. ಶ್ರೀನಿವಾಸ ಕಾಂಬಳೆ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರೆ, ಡಾ. ಮಂಜುಳಾ ತುರಮರಿ ಸುಂದರವಾಗಿ ನಿರೂಪಿಸಿದರು. ಕೊನೆಯಲ್ಲಿ ಕ್ಯಾಂಪ್ ಅಧಿಕಾರಿ ಡಾ. ನಾಗರಾಜ ಕಂಬಾರ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.

