ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಾಸಕರ ಮತಕ್ಷೇತ್ರ ಮಾದರಿ ಉನ್ನತೀಕರಿಸಿದ ಶಾಲೆ ನಂ. 4ರಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಸೋಮವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.


ಬೇಸಿಗೆ ರಜೆಯ ಬಳಿಕ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಹೂವು, ಚಾಕೊಲೇಟ್ ಹಾಗೂ ಸಿಹಿತಿಂಡಿ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಶಾಲಾ ಆವರಣವನ್ನು ಬಣ್ಣಬಣ್ಣದ ತೋರಣಗಳು, ಬಲೂನುಗಳು ಹಾಗೂ ಆಕರ್ಷಕ ರಂಗೋಲಿಗಳಿಂದ ಅಲಂಕರಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟ ವಿದ್ಯಾರ್ಥಿಗಳು ಉತ್ಸಾಹ ಹಾಗೂ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಲಕವಿಟ್ಟು ಸ್ವಾಗತ ಕೋರಿ, ಶಿಸ್ತು, ಪರಿಶ್ರಮ ಮತ್ತು ಏಕಾಗ್ರತೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದರು.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಜಿ. ಭಜಂತ್ರಿ ಮಾತನಾಡಿ, ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ “ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಧ್ಯೇಯದೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಲವು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ನೈತಿಕ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ವಿವಿಧ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, ನೋಟ್ಬುಕ್ಗಳು ಹಾಗೂ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ವೇಳೆ ಮೊದಲ ಬಾರಿಗೆ ಶಾಲೆಗೆ ಆಗಮಿಸಿದ ಪುಟಾಣಿ ಮಕ್ಕಳಿಗೆ ವಿಶೇಷವಾಗಿ ಸ್ವಾಗತ ಕೋರಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಂಗಮ್ಮ ಸಾಲಿ, ತಾ.ಪಂ. ಎಡಿಪಿಆರ್ ಅಪ್ಪಯ್ಯಪ್ಪ ಕುಂಬಾರ, ವ್ಯವಸ್ಥಾಪಕ ಗಂಗಾಧರ ಬಡೆಮ್ಮಿ, ಡಯಟ್ ಉಪನ್ಯಾಸಕಿ ಹೇಮಾವತಿ ಧರ್ಮಣ್ಣವರ, ಶಾಲಾ ಸುಧಾರಣಾ ಸಮಿತಿಯ ಸದಸ್ಯರಾದ ಶಂಕರ ಸಾಗರ, ಹಸನ್ ಗೊರವನಕೊಳ್ಳ, ಸುರೇಶ ಆನಿಕಿವಿ, ಜಗದೀಶ ತೋಟಗಿ, ಎಸ್ಡಿಎಂಸಿ ಸದಸ್ಯರಾದ ಮಹಾಂತೇಶ ರಾಜಗೋಳಿ, ಗದಿಗೆಪ್ಪ ಮಡಿವಾಳರ, ಪೂಜಾ ಕೊಟಬಾಗಿ, ಭಾರತಿ ಭಾದಾಮಿ, ಜ್ಯೋತಿ ಕುರಬೆಟ್ಟ, ಪವಿತ್ರ ತಲ್ಲೂರು, ಸೇವಂತಿ ಸೊಲಬಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
