ಬೆಳಗಾವಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ನೂತನ ಪ್ರಾಂಶುಪಾಲರ ಹುಚ್ಚು ನಿಯಮಗಳು ಮತ್ತು ಆಡಳಿತ ಮಂಡಳಿಯ ದಬ್ಬಾಳಿಕೆಗೆ ಈಗ ಪೋಷಕರು ಬೀದಿಗಿಳಿದಿದ್ದಾರೆ. ಶಾಲೆ ಆರಂಭವಾಗಿ ಕೇವಲ ನಾಲ್ಕೇ ದಿನಕ್ಕೆ ಶುಲ್ಕ ಕಟ್ಟದಿದ್ದರೆ ಮಕ್ಕಳಿಗೆ ಪುಸ್ತಕ ನೀಡಲ್ಲ ಎಂದು ಕಠಿಣ ನಿಯಮ ಜಾರಿಗೊಳಿಸಿದ್ದು, ಸರ್ಕಾರದ ಉಚಿತ ಪುಸ್ತಕಗಳಿಗೂ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಧೋರಣೆಯನ್ನು ಖಂಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಕ್ರಮಕೈಗೊಳ್ಳಲು ಆಗ್ರಹಿಸಲಾಯಿತು.

ಬೆಳಗಾವಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಪ್ರವೇಶ ಪಡೆಯುವಾಗ ಪ್ರತಿ ವರ್ಷ ಶುಲ್ಕ ಹೆಚ್ಚಿಸಲ್ಲ ಎಂದು ಹೇಳಲಾಗಿತ್ತು. ಆದರೆ ಈಗ ಎರಡು ವರ್ಷಕ್ಕೊಮ್ಮೆ ಮನಬಂದಂತೆ ಶುಲ್ಕ ಹೆಚ್ಚಿಸಲಾಗುತ್ತಿದೆ. ಅದರಲ್ಲೂ ಶಾಲೆ ಆರಂಭಗೊಂಡು ನಾಲ್ಕು ದಿನ ಕಳೆಯುವ ಮುನ್ನವೇ, ಇಡೀ ವರ್ಷದ ಶುಲ್ಕವನ್ನು ಒಟ್ಟಿಗೆ ಪಾವತಿಸದಿದ್ದರೆ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ನೀಡುವುದಿಲ್ಲ ಎಂದು ಹೊಸ ಪ್ರಾಂಶುಪಾಲರು ತಗಾದೆ ತೆಗೆದಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಸರ್ಕಾರದಿಂದ ಉಚಿತವಾಗಿ ಬರುವ ಪಠ್ಯಪುಸ್ತಕಗಳಿಗೂ ಸಹ ಪೋಷಕರಿಂದ ಹಣ ಪೀಕಲಾಗುತ್ತಿದ್ದು, ನಾವು ಸರ್ಕಾರಕ್ಕೆ ಹಣ ನೀಡಿ ಪುಸ್ತಕ ತಂದಿದ್ದೇವೆ ಎಂದು ಶಾಲಾ ಮಂಡಳಿ ಉದ್ಧಟತನದ ಉತ್ತರ ನೀಡುತ್ತಿದೆ. ಇಷ್ಟೇ ಅಲ್ಲದೆ, ನೋಟ್ ಬುಕ್‌ಗಳನ್ನು ಸಹ ಶಾಲೆಯಲ್ಲೇ ದುಪ್ಪಟ್ಟು ಹಣಕ್ಕೆ ಖರೀದಿಸುವಂತೆ ಪೋಷಕರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ.

ಒಂದು ವೇಳೆ ಶೀಘ್ರವಾಗಿ ಶುಲ್ಕ ಭರಿಸದಿದ್ದರೆ ಮಕ್ಕಳಿಗೆ ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ ಮತ್ತು ತಕ್ಷಣವೇ ವರ್ಗಾವಣೆ ಪತ್ರ (TC) ಪಡೆದುಕೊಂಡು ಹೋಗಿ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಇನ್ನು ಮಕ್ಕಳಿಗೆ ಭಾರವಾದ ದಪ್ಪನೆಯ ಪುಸ್ತಕಗಳನ್ನು ನೀಡುವುದರಿಂದ ಪ್ರತಿದಿನ ಬ್ಯಾಗ್ ಹೊರಲಾರದೆ ಮಕ್ಕಳು ಪರದಾಡುತ್ತಿದ್ದಾರೆ. ಇತ್ತ ಶಾಲೆಯ ಶಿಕ್ಷಕರಿಗೂ ಸರಿಯಾದ ವೇತನ ನೀಡದ ಹಿನ್ನೆಲೆಯಲ್ಲಿ ಅನುಭವಿ ಶಿಕ್ಷಕರು ಶಾಲೆಯನ್ನು ತೊರೆದಿದ್ದಾರೆ ಎನ್ನಲಾಗಿದೆ. ಈ ಕೂಡಲೇ ಬೆಳಗಾವಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪೋಷಕರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
