ಕಳೆದ ಮೇ ತಿಂಗಳ ದಿನಾಂಕ ರಂದು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಲವ್ ಜಿಹಾದ್ಗೆ ಹೆದರಿ ಅಪ್ರಾಪ್ತ ಯುವತಿ ಪೂರ್ಣಿಮಾ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ, ಭಾನುವಾರ ಸಂಜೆ ನಿವಾಸಕ್ಕೆ ಭೇಟಿ ನೀಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಶಾಸಕ ಅಮೃತ ಸಾಂತ್ವನ ಹೇಳಿದರು.

ಕೇಂದ್ರ ಸಚಿವರು ಬರುತ್ತಿದ್ದಂತೆ ಪೂರ್ಣಿಮಾ ತಂದೆ, ತಾಯಿ ಸಚಿವರ ಪಾದಕ್ಕೆ ನಮಸ್ಕರಿಸಲು ಮುಂದಾದರು. ಈ ವೇಳೆ ಜೋಶಿ ಅವರು ಹಾಗೆಲ್ಲ ಮಾಡಬೇಡಿ ಎಂದು ಅವರಿಗೆ ಸಮಾಧಾನ ಮಾಡಿದರು. ನಂತರ ಅವರಿಂದ ಮಾಹಿತಿ ಪಡೆದ ಕೇಂದ್ರ ಸಚಿವರು, ಈ ಪ್ರಕರಣದಲ್ಲಿ ಆ ಸಮಯದಲ್ಲಿ ಯಾರು ಪಿಎಸ್ಐ ಇದ್ದರೋ ಅವರ ಮೇಲೂ ಕ್ರಮ ಆಗಬೇಕು. ಕೇವಲ ಸಿಪಿಐ ಅವರನ್ನು ಅಮಾನತ್ತು ಮಾಡಿದರೆ ಸಾಲದು. ದುಡ್ಡು ಕೊಟ್ಟು ಪೊಲೀಸರೇ ರಾಜಿ ಸಂಧಾನ ಮಾಡುತ್ತಾರೆ ಎಂದರೆ ಏನಿದು ಅರ್ಥ? ಇಲ್ಲಿಯವರೆಗೂ ಯಾರ್ಯಾರ ಮೇಲೆ ಕ್ರಮ ಆಗಿದೆ ಎಂದು ಸ್ಥಳದಲ್ಲೇ ಇದ್ದ ಎಸ್ಪಿ ಅವರನ್ನು ಜೋಶಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಗುಂಜನ್ ಆರ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನ ಆಗಿದೆ. ಪೊಲೀಸ್ ಅಧಿಕಾರಿ ಅಮಾನತ್ತು ಮಾಡಲಾಗಿದೆ ಎಂದರು. ಆ ಸಮಯದಲ್ಲಿ ಯಾರು ಪಿಎಸ್ಐ ಇದ್ದರೋ ಅವರ ಮೇಲೂ ಕ್ರಮ ಆಗಬೇಕು. ಪೊಲೀಸ್ ಅಧಿಕಾರಿಗಳ ಮೇಲೂ ಅಟ್ರಾಸಿಟಿ ದೂರು ದಾಖಲಿಸಿಕೊಳ್ಳಿ. ಬೇಕಾದರೆ, ಆ ಕುಟುಂಬಸ್ಥರು ದೂರು ನೀಡುತ್ತಾರೆ ಎಂದು ಜೋಶಿ ಸೂಚಿಸಿದರು. ಬಳಿಕ ಕುಟುಂಬಸ್ಥರಿಗೆ ನಿಮ್ಮ ಜೊತೆ ನಾವಿದ್ದೇವೆ. ಯಾವುದಕ್ಕೂ ಹೆದರಬೇಡಿ. ಧೈರ್ಯ ತೆಗೆದುಕೊಳ್ಳಿ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.
