Vijaypura

ಭೀಮಾತೀರ ನರಮೇಧದ ರೂವಾರಿ ಅರೆಸ್ಟ್: ಕಾಲಿಗೆ ಗುಂಡು ಹಾರಿಸಿ ಸುಪಾರಿ ಕಿಲ್ಲರ್ ಸೆರೆ

Share

ವಿಜಯಪುರ ಜಿಲ್ಲೆಯ ಭೀಮಾತೀರವನ್ನು ಬೆಚ್ಚಿಬೀಳಿಸಿದ್ದ ಆರು ಜನರ ಬರ್ಬರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ನರಮೇಧದ ಪ್ರಮುಖ ಆರೋಪಿಯಾಗಿದ್ದ ಸುಪಾರಿ ಕಿಲ್ಲರ್ ಮಹೇಶ್ ತಳವಾರ್ ಅಲಿಯಾಸ್ ಮಹೇಶನನ್ನು ಚಡಚಣ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧನಕ್ಕೆ ತೆರಳಿದ ಪೊಲೀಸರ ಮೇಲೆಯೇ ಕಲ್ಲು ತೂರಿ ದಾಳಿ ನಡೆಸಿದ ಆರೋಪಿಗೆ ಸಿಪಿಐ ಪರಶುರಾಮ್ ಮನಗೂಳಿ ಗುಂಡೇಟಿನ ರುಚಿ ತೋರಿಸಿದ್ದು, ಕಾಲಿಗೆ ಫೈರ್ ಮಾಡಿ ವಶಕ್ಕೆ ಪಡೆದಿದ್ದಾರೆ. 23 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖದೀಮನ ಅಂತ್ಯ ಹೇಗಾಯ್ತು ಎನ್ನುವ ವರದಿ ಇಲ್ಲಿದೆ…

ಭೀಮಾತೀರದ ನೆಲವನ್ನೇ ರಕ್ತದಿಂದ ಕೆಂಪು ಮಾಡಿದ ನರಮೇಧದ ರೂವಾರಿ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ. ಕಳೆದ ಮೇ 29ರಂದು ಗೋವಿಂದಪುರ ಗ್ರಾಮದ ಜಮೀನೊಂದರಲ್ಲಿ ನಿರಾಳೆ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯಾಕಾಂಡದ ಹಿಂದಿದ್ದ ಪ್ರಮುಖ ಸೂತ್ರಧಾರ ಮಹೇಶ್ ತಳವಾರ್, 15 ಲಕ್ಷ ರೂಪಾಯಿ ಸುಪಾರಿ ಪಡೆದು ತನ್ನ ಗ್ಯಾಂಗ್ ಮೂಲಕ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.
ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಮಹೇಶ್, ಕಳೆದ 23 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಾಡುತ್ತಿದ್ದ. ಆದರೆ ಇಟ್ಟಂಗಿಹಾಳ ಗ್ರಾಮದ ಹೊರವಲಯದಲ್ಲಿ ಅಡಗಿರುವ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಚಡಚಣ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಇನ್ಬು ಆರೋಪಿಯನ್ನು ಬಂಧಿಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ ಪರಿಸ್ಥಿತಿ ಹೈಡ್ರಾಮಾಕ್ಕೆ ತಿರುಗಿತು. ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಹೇಶ್ ತಳವಾರ್ ಪೊಲೀಸರ ಮೇಲೆಯೇ ಕಲ್ಲು ತೂರಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಶೇಖರ್ ಪವಾರ್ ಹಾಗೂ ವಿಜಯಕುಮಾರ್ ಬನಸೋಡೆ ಗಾಯಗೊಂಡಿದ್ದಾರೆ.
ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತ ತಲುಪುತ್ತಿದ್ದಂತೆ ಚಡಚಣ ಸಿಪಿಐ ಪರಶುರಾಮ್ ಮನಗೂಳಿ ಎಚ್ಚರಿಕೆಯ ಕ್ರಮವಾಗಿ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ನೆಲಕ್ಕುರುಳಿದ ಮಹೇಶ್ ತಳವಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಗೊಂಡ ಆರೋಪಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ನಲ್ಲಿ ಭೀಮಾತೀರದಲ್ಲಿ ರಕ್ತದೋಕುಳಿ ಹರಿಸಿದ್ದ ಸುಪಾರಿ ಕಿಲ್ಲರ್‌ಗೆ ಖಾಕಿ ಪಡೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದು, ಪೊಲೀಸರ ದಿಟ್ಟ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್,
ವಿಜಯಪುರ‌‌.

Tags:

error: Content is protected !!