ದೃಷ್ಟಿ ಇಲ್ಲದಿದ್ದರೂ ಪರವಾಗಿಲ್ಲ, ದೇವರು ಕೊಟ್ಟಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಸಾಧನೆ ಮಾಡಿ ಎಂದು ಡಾ. ಸಾವಿತ್ರಿ ದೊಡ್ಡಣ್ಣವರ್ ಕರೆ ನೀಡಿದರು.
ಬೆಳಗಾವಿ ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 146ನೇ ಹೆಲೆನ್ ಕೆಲರ್ ದಿನಾಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸಾವಿತ್ರಿ ದೊಡ್ಡಣ್ಣವರ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಹೆಲೆನ್ ಕೆಲರ್ ಅವರು ದೃಷ್ಟಿ ಮತ್ತು ಶ್ರವಣ ದೋಷ ಹೊಂದಿದ್ದರೂ ಸಹ ತಮ್ಮ ಗುರುವಿನ ಸಹಾಯದಿಂದ ಜಗತ್ತಿನಾದ್ಯಂತ ಪ್ರಸಿದ್ಧ ಭಾಷಣಕಾರರಾಗಿ ಮತ್ತು ಶಿಕ್ಷಕರಾಗಿ ಮಿಂಚಿದರು. ಅವರ ಜೀವನದ ಹೋರಾಟ ಹಾಗೂ ಸಾಧನೆ ಇಂದಿನ ಎಲ್ಲಾ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಅವರು, “ನಿಮಗೆ ಕಣ್ಣು ಕಾಣಿಸುವುದಿಲ್ಲ ಎಂದು ಎಂದಿಗೂ ಬೇಸರ ಪಟ್ಟುಕೊಳ್ಳಬೇಡಿ.


ದೇವರು ದೃಷ್ಟಿಯನ್ನು ನೀಡದಿದ್ದರೂ, ನಿಮ್ಮಲ್ಲಿ ಹಾಡುಗಾರಿಕೆ, ತಬಲಾ ವಾದನ ಅಥವಾ ಓದುವಿಕೆಯಂತಹ ಮತ್ಯಾವುದೋ ಅದ್ಭುತವಾದ ವಿಶೇಷ ಪ್ರತಿಭೆಯನ್ನು ಕರುಣಿಸಿರುತ್ತಾನೆ. ನಿಮ್ಮಲ್ಲಿರುವ ಆ ಸುಪ್ತ ಪ್ರತಿಭೆಯನ್ನು ಗುರುತಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು,” ಎಂದು ಮಕ್ಕಳಿಗೆ ಧೈರ್ಯ ತುಂಬಿದರು.

ನಂತರ ವಿದ್ಯಾರ್ಥಿ ವಿವೇಕ್ ಸೋಂಟಕ್ಕಿ ಹೆಲನ್ ಕೇಲರ್ ಕುರಿತು ಭಾಷಣವನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ, ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬಿಡಿಎಬಿ ಅಧ್ಯಕ್ಷರಾದ ಚಿಂತಾಮಣಿ ಗ್ರಾಮೋಪಾಧ್ಯೆ ವಹಿಸಿದ್ದರು.

ಆರಂಭದಲ್ಲಿ ಬಿಡಿಎಬಿ ಜಂಟಿ ಕಾರ್ಯದರ್ಶಿಗಳಾದ ಕಾಂತೇಶ್ ಆಚಾರ್ಯ ಎಲ್ಲರನ್ನೂ ಸ್ವಾಗತಿಸಿದರೆ, ದ್ವಿತೀಯ ಉಪಾಧ್ಯಕ್ಷರಾದ ಕೀರ್ತಿ ರಜಪೂತ್ ಅವರು ಅತಿಥಿಗಳನ್ನು ಪರಿಚಯಿಸಿದರು. ಮಾಹೇಶ್ವರಿ ಅಂಧರ ಶಾಲೆಯ ಪ್ರಾಚಾರ್ಯರಾದ ಅನಿತಾ ಗಾವಡೆ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಸಂಗೀತ ಶಿಕ್ಷಕರಾದ ಸ್ಮಿತಾ ಮಿಟಗಾರ ಹಾಗೂ ಮೊಬಿಲಿಟಿ ಟ್ರೈನರ್ ಆದ ಕೆ. ಮಲ್ಲಪ್ಪ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

