ಖಾನಾಪುರ ತಾಲೂಕಿನಲ್ಲಿ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಅರ್ಹ ಮತದಾರರ ನಿಖರ ನೋಂದಣಿಗಾಗಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಮತದಾರರು ತಮ್ಮ ವ್ಯಾಪ್ತಿಯ ಬಿಎಲ್‌ಒ ಅಧಿಕಾರಿಗಳಿಗೆ ನಿಖರ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ಕೋರಲಾಗಿದೆ.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಸ್ತುತ ನಡೆಯುತ್ತಿರುವ ಎಸ್‌ಐಆರ್ ಅಭಿಯಾನದಡಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ನಿವಾರಿಸಲು ಮತ್ತು ಅರ್ಹ ಮತದಾರರ ಹೆಸರನ್ನು ನಿಖರವಾಗಿ ನೋಂದಾಯಿಸಲು ಖಾನಾಪುರ ತಾಲೂಕಿನಲ್ಲಿ ವ್ಯಾಪಕ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಲರಾಮ್ ಚೌಹಾಣ್ ತಿಳಿಸಿದ್ದಾರೆ. ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರ ಮನೆ ಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ತಮ್ಮ ಬಣ್ಣದ ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ತಾಲೂಕಿನಲ್ಲಿ ಒಟ್ಟು 312 ಬಿಎಲ್‌ಒಗಳನ್ನು ನೇಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಮತದಾರರ ಗುರುತಿನ ಚೀಟಿ, ಪಟ್ಟಿಯಲ್ಲಿನ ಹೆಸರು ಮತ್ತು ವಿಳಾಸದ ಪರಿಶೀಲನೆಗಾಗಿ ಸಾರ್ವಜನಿಕರು ಜನನ ಪ್ರಮಾಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ), ಜಾತಿ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಜಮೀನು ಅಥವಾ ಮನೆ ಹಂಚಿಕೆ ಪತ್ರ ಮುಂತಾದ ಅಗತ್ಯ ದಾಖಲೆಗಳನ್ನು ಒದಗಿಸಿ, ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಸಹಕರಿಸಬೇಕೆಂದು ಚೌಹಾಣ್ ಕರೆ ನೀಡಿದ್ದಾರೆ.
