Belagavi

ಫೆಡರೇಷನ್ ಕಪ್ ದೇಹದಾರ್ಢ್ಯ: ಮಹಾರಾಷ್ಟ್ರಕ್ಕೆ ಸಾಂಘಿಕ ಪ್ರಶಸ್ತಿ; ಅರ್ಬಾಜ್ ಖಾನ್ ‘ಚಾಂಪಿಯನ್ ಆಫ್ ಚಾಂಪಿಯನ್ಸ್’!

Share

ಪಂಜಾಬ್‌ನ ಲುಧಿಯಾನದಲ್ಲಿ ನಡೆದ 15ನೇ ಫೆಡರೇಷನ್ ಕಪ್ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ತಂಡ ಪುರುಷರ ವಿಭಾಗದ ಒಟ್ಟಾರೆ ಸಾಂಘಿಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಮಧ್ಯಪ್ರದೇಶದ ಅರ್ಬಾಜ್ ಖಾನ್ ಅತ್ಯುನ್ನತ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪಟ್ಟ ಅಲಂಕರಿಸಿದ್ದಾರೆ.

ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಷನ್ ಆಯೋಜಿಸಿದ್ದ ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರ ಪುರುಷರ ತಂಡ 180 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಉತ್ತರಾಖಂಡ (175 ಅಂಕ) ರನ್ನರ್ ಅಪ್ ಪ್ರಶಸ್ತಿ ಗಳಿಸಿತು. ಮಹಿಳಾ ವಿಭಾಗದಲ್ಲಿ ಅರುಣಾಚಲ ಪ್ರದೇಶ ಪ್ರಥಮ ಹಾಗೂ ಸಿಕ್ಕಿಂ ದ್ವಿತೀಯ ಸ್ಥಾನ ಪಡೆದವು. ವೈಯಕ್ತಿಕ ವಿಭಾಗದಲ್ಲಿ, 85 ಕೆಜಿ ವಿಭಾಗದ ವಿಜೇತ ಮಧ್ಯಪ್ರದೇಶದ ಅರ್ಬಾಜ್ ಖಾನ್ ಎಲ್ಲಾ ವಿಭಾಗದ ಚಾಂಪಿಯನ್ನರನ್ನು ಹಿಂದಿಕ್ಕಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಗೌರವಕ್ಕೆ ಪಾತ್ರರಾದರು. ಇನ್ನುಳಿದಂತೆ 70 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಸಯ್ಯದ್ ಹಬೀಬ್ ಹಾಗೂ ಮೆನ್ಸ್ ಅಥ್ಲೆಟಿಕ್ ಫಿಸಿಕ್‌ನಲ್ಲಿ ಚಂದನ್ ಮಾಧುರಿ ಚಿನ್ನದ ಪದಕ ಗೆದ್ದರೆ, 70 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರದೀಪ್ ಠಾಕೂರ್ ಜಯಭೇರಿ ಬಾರಿಸಿದರು. ಕರ್ನಾಟಕದ ಪರವಾಗಿ ಮಹಿಳಾ ಕ್ರೀಡಾ ಫಿಸಿಕ್ ವಿಭಾಗದಲ್ಲಿ ಬೆಳಗಾವಿಯ ಕೇತಕಿ ಪಾಟೀಲ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದರೆ, 65 ಕೆಜಿ ಪುರುಷರ ವಿಭಾಗದಲ್ಲಿ ರಿಷಭ್ ವಸಿಷ್ಠ ನಾಲ್ಕನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Tags:

error: Content is protected !!