ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ, ಪುನರ್ವಸತಿ ಸೌಲಭ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ನೂರಾರು ರೈತರು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನೂ ರೈತರು ನೀಡಿದ್ದಾರೆ. ಈ ಕುರಿತು ಒಂದು ವರದಿ.


ಹೌದು, ವಿಜಯಪುರ ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳಿಗಾಗಿ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರು ಹಲವು ವರ್ಷಗಳಿಂದ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ ಸರ್ಕಾರಗಳು ಬದಲಾಗಿದ್ದರೂ ರೈತರ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಆಲಮಟ್ಟಿಯ ಕೆಬಿಜೆಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸನ್ 2013ಕ್ಕೂ ಮೊದಲು ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು. ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಭೂಸ್ವಾಧೀನ ಅವಾರ್ಡ್ ಕಾರ್ಡ್ ವಿತರಿಸಬೇಕು. 371(ಜೆ) ವ್ಯಾಪ್ತಿಯ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಎಲ್ಲ ನಿರಾಶ್ರಿತ ಕುಟುಂಬಗಳಿಗೂ ಸೌಲಭ್ಯಗಳು ದೊರೆಯಬೇಕು ಎಂಬುದು ರೈತರ ಪ್ರಮುಖ ಆಗ್ರಹವಾಗಿತ್ತು.

ಇದರ ಜೊತೆಗೆ ಬಾಕಿ ಉಳಿದ ಪರಿಹಾರ ಮೊತ್ತ ಬಿಡುಗಡೆ, ನಿರಾಶ್ರಿತರಿಗೆ ಉದ್ಯೋಗ, ಪುನರ್ವಸತಿ ಸೌಲಭ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒಟ್ಟು 15ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟ ರೈತರು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು. ರಾಜ್ಯದ ಅಭಿವೃದ್ಧಿಗಾಗಿ ರೈತರು ತಮ್ಮ ಜೀವನಾಧಾರವಾದ ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದರೆ ಅಭಿವೃದ್ಧಿಯ ಫಲ ಮಾತ್ರ ರೈತರಿಗೆ ತಲುಪಿಲ್ಲ. ಅನೇಕ ಕುಟುಂಬಗಳು ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿವೆ. ಸರ್ಕಾರ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸ ಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ಒಟ್ಟಾರೆ, ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ, ಸಮರ್ಪಕ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ನಡೆದ ಈ ಬೃಹತ್ ಪ್ರತಿಭಟನೆ ಉತ್ತರ ಕರ್ನಾಟಕದ ರೈತರ ಅಸಮಾಧಾನಕ್ಕೆ ವೇದಿಕೆಯಾಗಿದೆ. ಸರ್ಕಾರ ಈ ಬೇಡಿಕೆಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ ಎಂಬುದರ ಮೇಲೆ ರೈತರ ಮುಂದಿನ ಹೋರಾಟದ ರೂಪುರೇಷೆಗಳು ನಿರ್ಧಾರವಾಗಲಿವೆ.
