Bagalkot

ಬಾಗಲಕೋಟೆಯಲ್ಲಿ ತ್ರಿಕೋನ ಪ್ರೇಮಕಥೆ: ಯುವಕನನ್ನು ಬರ್ಬರ ಕೊಲೆ ಮಾಡಿ ನದಿಗೆ ಎಸೆದ ಪಾಪಿಗಳು!

Share

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ತ್ರಿಕೋನ ಪ್ರೇಮಕಥೆಯೊಂದು ಯುವಕನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿದೆ. ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದ ಮತ್ತೊಬ್ಬ ಪ್ರೇಮಿ ಹಾಗೂ ಆಕೆಯ ಸಹೋದರ ಸೇರಿ, ಜಾತ್ರೆಗೆ ಬಂದಿದ್ದ ಯುವಕನನ್ನು ಹತ್ಯೆ ಮಾಡಿ ಕೃಷ್ಣಾ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ವಿಕಾಸ್ ಸಂಗಪ್ಪ ದಳವಾಯಿ (19) ಕೊಲೆಯಾದ ದುರ್ದೈವಿ. ವಿಕಾಸ್ ಹಾಗೂ ಆರೋಪಿ ಕೃಷ್ಣಾ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಗೊತ್ತಿಲ್ಲದಂತೆ ಗ್ರಾಮದ ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು. ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಗಾಗಿ ಇಬ್ಬರೂ ಜಂಟಿಯಾಗಿ ತವರಿಗೆ ಬಂದಿದ್ದರು. ಈ ವೇಳೆ ಇಬ್ಬರ ಪ್ರೀತಿಯ ಮ್ಯಾಟರ್ ಬಯಲಾಗಿದ್ದು, ಮೇ 20 ರಂದು ಜಾತ್ರೆಯಲ್ಲಿದ್ದ ವಿಕಾಸ್‌ನನ್ನು ಆರೋಪಿ ಕೃಷ್ಣಾ ಹಾಗೂ ಯುವತಿಯ ಸಹೋದರ ರಾಜು ಉಪಾಯವಾಗಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೃತ್ಯದ ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಅದಕ್ಕೆ ಕಲ್ಲು ಕಟ್ಟಿ ಅನಾಗವಾಡಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಎಸೆದು ಪರಾರಿಯಾಗಿದ್ದರು.
ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ವಿಕಾಸ್ ಪೋಷಕರು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತೀವ್ರ ಹುಡುಕಾಟ ನಡೆಸುತ್ತಿದ್ದಾಗ, ಕೊಲೆಯಾಗಿ 6 ದಿನಗಳ ಬಳಿಕ ಇಂದು ಅನಾಗವಾಡಿ ಸೇತುವೆ ಹತ್ತಿರ ನದಿಯಲ್ಲಿ ವಿಕಾಸ್ ಶವ ಪತ್ತೆಯಾಗಿದೆ. ಶವ ಸಿಕ್ಕ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಇದು ತ್ರಿಕೋನ ಪ್ರೇಮದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂಬುದು ಸದ್ಯ ದೃಢಪಟ್ಟಿದೆ. ಸದ್ಯ ಕೃತ್ಯ ಎಸಗಿದ ಪ್ರಿಯತಮ ಕೃಷ್ಣಾ ಹಾಗೂ ಯುವತಿಯ ಸಹೋದರ ರಾಜು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬೀಳಗಿ ಪೊಲೀಸರು ಬಲೆ ಬೀಸಿದ್ದಾರೆ.

Tags:

error: Content is protected !!