ಬಾಗಲಕೋಟೆಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ವಲ್ಲಭಾಯ್ ವೃತ್ತದ ಬಳಿ ಇರುವ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಆದರೆ ಮನೆಯಲ್ಲಿ ಸಾಕಿದ್ದ ಬೆಕ್ಕಿನ ಸಮಯಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದ್ದು, ಕುಟುಂಬಸ್ಥರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬಾಗಲಕೋಟೆಯ ವಲ್ಲಭಾಯ್ ವೃತ್ತದ ಸಮೀಪವಿರುವ ಶಬ್ಬೀರ್ ಭಾಗವಾನ್ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ನಿರಂತರ ಮಳೆಯಿಂದಾಗಿ ಏಕಾಏಕಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಬೀಳುವ ಕೆಲವೇ ಕ್ಷಣಗಳ ಮುನ್ನ ಮನೆಯಲ್ಲಿದ್ದ ಸಾಕಿದ ಬೆಕ್ಕು ದಿಢೀರನೆ ಹೊರಗೆ ಓಡಿದೆ. ಇದನ್ನು ಗಮನಿಸಿದ ಮನೆ ಮಾಲೀಕ ಶಬ್ಬೀರ್ ಭಾಗವಾನ್ ಹಾಗೂ ಅವರ ಪುತ್ರ ಅರ್ಬಾಜ್ ಭಾಗವಾನ್ ಅವರು ಬೆಕ್ಕನ್ನು ಹಿಡಿಯಲು ಮನೆಯಿಂದ ಹೊರಗೆ ಬಂದಿದ್ದಾರೆ. ಇವರಿಬ್ಬರು ಹೊರಬರುತ್ತಿದ್ದಂತೆ ಇಡೀ ಮೇಲ್ಛಾವಣಿ ಧರೆಗುರುಳಿದೆ. ಮದುವೆ ಕಾರ್ಯಕ್ರಮ ನಿಮಿತ್ತ ಕುಟುಂಬದ ಉಳಿದ ಸದಸ್ಯರು ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿದ್ದ ತಂದೆ-ಮಗ ಇಬ್ಬರೂ ಬೆಕ್ಕನ್ನು ಹಿಡಿಯಲು ಹೋದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದು, ಸಾಕಿದ ಮೂಕಪ್ರಾಣಿ ಇಡೀ ಕುಟುಂಬದ ಪಾಲಿಗೆ ಸಂಜೀವಿನಿಯಾಗಿದೆ.

ಇನ್ನು ಈ ದುರಂತದಿಂದಾಗಿ ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ನಾಶವಾಗಿವೆ. ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಮನೆಯಲ್ಲಿ ಶೇಖರಿಸಿಡಲಾಗಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮಾವಿನ ಹಣ್ಣುಗಳು ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿ ಹಾಳಾಗಿವೆ. ಇದರೊಂದಿಗೆ ಮನೆಯಲ್ಲಿದ್ದ ಧವಸ ಧಾನ್ಯಗಳು ಹಾಗೂ ಗೃಹೋಪಯೋಗಿ ಪಾತ್ರೆಗಳೂ ಸಹ ಮಣ್ಣು ಪಾಲಾಗಿವೆ. ಇಡೀ ಮನೆ ವಾಸಕ್ಕೆ ಯೋಗ್ಯವಿಲ್ಲದಂತೆ ಸಂಪೂರ್ಣ ಹಾನಿಗೊಳಗಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಭಾಗವಾನ್ ಕುಟುಂಬಸ್ಥರು ತಮಗೆ ಸೂಕ್ತ ಸರ್ಕಾರಿ ಪರಿಹಾರ ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.
