ಬೆಳಗಾವಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಕಾರು ಚಲಾಯಿಸಲು ನೀಡಿ ಸಂಚಾರ ನಿಯಮ ಉಲ್ಲಂಘಿಸಿದ್ದ ಪೋಷಕರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ರಸ್ತೆಗಿಳಿದಿದ್ದ ಬಾಲಕನನ್ನು ಕಾರು ಸಮೇತ ವಶಕ್ಕೆ ಪಡೆದಿರುವ ಸಂಚಾರಿ ಪೊಲೀಸರು, ಪೋಷಕರಿಗೆ ಬರೋಬ್ಬರಿ 25 ಸಾವಿರ ರೂಪಾಯಿ ದಂಡದ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ ನಗರದ ರಾಣಿ ಚನ್ನಮ್ಮ ಸರ್ಕಲ್ ಹಾಗೂ ಗಣೇಶಗುಡಿ ಹತ್ತಿರ ದಿನಾಂಕ 08/06/2026 ರಂದು ಬೆಳಗ್ಗೆ 10:50 ರ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ KA-26-M-3409 ನಂಬರಿನ ಕಾರನ್ನು ಚಲಾಯಿಸುತ್ತಿರುವುದನ್ನು ಸಂಚಾರ ಕರ್ತವ್ಯದಲ್ಲಿದ್ದ ಪೊಲೀಸರು ಪತ್ತೆ ಹಚ್ಚಿ, ವಾಹನ ಸಮೇತ ಆತನನ್ನು ಹಿಡಿದುಕೊಂಡಿದ್ದಾರೆ. ತಕ್ಷಣವೇ ಬಾಲಕನ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿದ ಅಧಿಕಾರಿಗಳು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ನೀಡುವುದು ಕಾನೂನು ಬಾಹಿರ ಹಾಗೂ ದಂಡನೀಯ ಅಪರಾಧ ಎಂದು ಸೂಕ್ತ ತಿಳುವಳಿಕೆ ನೀಡಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ನೋಟಿಸ್ ಜಾರಿ ಮಾಡಲಾಗಿದ್ದು, ವಾಹನದ ಮಾಲೀಕರು/ಪೋಷಕರು ಈಗ ಮಾನ್ಯ ನ್ಯಾಯಾಲಯದಲ್ಲಿ 25,000 ರೂಪಾಯಿ ದಂಡ ಪಾವತಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ನೀಡಬಾರದು ಹಾಗೂ ರಸ್ತೆ ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸ್ ಆಯುಕ್ತರು ಕಡಕ್ ಎಚ್ಚರಿಕೆ ನೀಡಿದ್ದಾರೆ.

