Vijaypura

ಚಡ್ಡಿ ಗ್ಯಾಂಗ್ ಅಟ್ಟಹಾಸಕ್ಕೆ ಬೆಚ್ಚಿದ ವಿಜಯಪುರ; ಪೊಲೀಸರಿಗೆ ಹೆಚ್ಚಿದ ಸವಾಲು

Share

ಭೀಮಾತೀರದ ನಾಡು ವಿಜಯಪುರದಲ್ಲಿ ಈಗ ಹೊಸದೊಂದು ಆತಂಕ ಶುರುವಾಗಿದೆ. ಬೇಸಿಗೆಯ ಸುಡು ಬಿಸಿಲಿನ ನಡುವೆಯೇ ಜಿಲ್ಲೆಗೆ ಖತರ್ನಾಕ್ ಕಳ್ಳರ ಗ್ಯಾಂಗ್ ಒಂದು ಎಂಟ್ರಿ ಕೊಟ್ಟಿದೆ. ಬರೀ ಚಡ್ಡಿ, ಕಚ್ಚೆ ಧರಿಸಿ, ಮುಖಕ್ಕೆ ಮುಖವಾಡ ಹಾಕಿಕೊಂಡು ಬರ್ತಿರೋ ಈ ಡೆಡ್ಲಿ ಗ್ಯಾಂಗ್, ಸಾರ್ವಜನಿಕರ ನಿದ್ದೆಗೆಡಿಸಿದೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಈ ಚಡ್ಡಿ ಗ್ಯಾಂಗ್ ಅಕ್ಷರಶಃ ದಾಂಗುಡಿ ಇಟ್ಟಿದ್ದು, ಜನ ಆತಂಕದ ನೆರಳಿನಲ್ಲಿ ಬದುಕುವಂತಾಗಿದೆ. ಈ ಕುರಿತು ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ವಿಜಯಪುರ ಜಿಲ್ಲೆಯಲ್ಲಿ ಖತರ್ನಾಕ್ ಕಳ್ಳರ ಹಾವಳಿ ಮಿತಿ ಮೀರಿದೆ. ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಬರೀ ಚಡ್ಡಿ, ಕಚ್ಚೆ ಧರಿಸಿ, ಮುಖಕ್ಕೆ ಮುಖವಾಡ ಹಾಕಿಕೊಂಡು ಬರುತ್ತಿರುವ ಈ ಗ್ಯಾಂಗ್ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಬರೀ ಕೈಯಲ್ಲಿ ಬಾರದ ಈ ಕಳ್ಳರು, ಬೆನ್ನ ಹಿಂದೆ ತಲವಾರ್, ಮಚ್ಚುಗಳಂತಹ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಡೆಡ್ಲಿಯಾಗಿ ದಾಳಿ ನಡೆಸುತ್ತಿದ್ದಾರೆ. ನಾಲ್ಕು ಜನರ ಈ ಚಡ್ಡಿ ಗ್ಯಾಂಗ್ ಜುಮನಾಳ ಗ್ರಾಮದಲ್ಲಿ ಸೃಷ್ಟಿಸಿರುವ ಭೀತಿ ಅಷ್ಟಿಷ್ಟಲ್ಲ. ಬೇಸಿಗೆಯ ಧಗಧಗಿಸುವ ಸೆಕೆಗೆ ಗ್ರಾಮೀಣ ಭಾಗದ ಜನ ರಾತ್ರಿ ವೇಳೆ ತಂಪು ಗಾಳಿಗಾಗಿ ಮನೆ ಹೊರಗೆ ಅಥವಾ ಮನೆಯ ಛತ್ ಮೇಲೆ ಮಲಗುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಈ ಕಳ್ಳರ ಗ್ಯಾಂಗ್, ಜನ ಹೊರಗೆ ಮಲಗಿರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಜನ ಹೊರಗಡೆ ಮಲಗಿದ್ದಾಗ ಸದ್ದಿಲ್ಲದೇ ಮನೆಯ ಬಾಗಿಲು ಮುರಿದು ಒಳನುಗ್ಗುವ ಖದೀಮರು, ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದಾರೆ.

ಜುಮನಾಳ ಗ್ರಾಮದ ಶ್ರೀಕಾಂತ್ ಪೂಜಾರಿ ಎಂಬುವರ ಮನೆಯಲ್ಲಿ ಈ ಚಡ್ಡಿ ಗ್ಯಾಂಗ್ ಭರ್ಜರಿ ಕಳ್ಳತನ ಮಾಡಿದೆ. ಮನೆಯವರು ಹೊರಗೆ ಮಲಗಿದ್ದನ್ನು ಗಮನಿಸಿ ನುಗ್ಗಿದ ಕಳ್ಳರು, ಮಹಿಳೆಯೊಬ್ಬರ 20 ಗ್ರಾಂ ತೂಕದ ಚಿನ್ನದ ತಾಳಿಸರ ಹಾಗೂ ಮನೆಯಲ್ಲಿದ್ದ 60 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಸದ್ಯ ಜುಮನಾಳ ಗ್ರಾಮಸ್ಥರು ಕಳ್ಳರ ಈ ಹಾವಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿ, ಈ ಡೆಡ್ಲಿ ಚಡ್ಡಿ ಗ್ಯಾಂಗ್‌ಗೆ ಬ್ರೇಕ್ ಹಾಕಬೇಕೆಂದು ಗ್ರಾಮಸ್ಥರು ಆಕ್ರೋಶದೊಂದಿಗೆ ಆಗ್ರಹಿಸುತ್ತಿದ್ದಾರೆ.

ಒಟ್ಟಿನಲ್ಲಿ, ಭೀಮಾತೀರದ ಜಿಲ್ಲೆಯಲ್ಲಿ ಮುಖವಾಡ ಧಾರಿ ಚಡ್ಡಿ ಗ್ಯಾಂಗ್ ಸಾರ್ವಜನಿಕರ ನಿದ್ದೆ ಗೆಡಿಸಿರೋದಂತೂ ನಿಜ. ಇನ್ನಾದರೂ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು, ಜುಮನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕಿದೆ.

Tags:

error: Content is protected !!