ಬೆಳಗಾವಿಯ ಶಿವಾನಂದ ನೀಲಣ್ಣವರ ಒಡೆತನದ ಶಿವಂ ಅಸೋಸಿಯೇಟ್ಸ್ನ 4,500 ಕೋಟಿ ರೂಪಾಯಿ ವಂಚನೆ ಪ್ರಕರಣದ ಹಿನ್ನೆಲೆ ದೇಶ ಕಾಯುವ ಮಾಜಿ ಸೈನಿಕರು ತಮಗೆ ಬಂದಿದ್ದ ಪೆನ್ಷನ್ ಹಾಗೂ ನಿವೃತ್ತಿ ಹಣವನ್ನು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಈ ಹಿನ್ನೆಲೆ ಹೂಡಿಕೆ ಹಣ ವಾಪಸ್ ನೀಡುವಾಗ ಮೊದಲ ಆದ್ಯತೆಯನ್ನು ಮಾಜಿ ಸೈನಿಕರಿಗೆ ನೀಡಬೇಕು ಎಂದು ಮಾಜಿ ಸೈನಿಕರ ಸಂಘದ ಮಹಾಒಕ್ಕೂಟದ ಅಧ್ಯಕ್ಷ ಜಗದೀಶ್ ಪುಜಾರಿ, ಹೂಡಿಕೆ ಹಣ ವಾಪಸ್ ನೀಡುವಾಗ ಮೊದಲ ಆದ್ಯತೆಯನ್ನು ಮಾಜಿ ಸೈನಿಕರಿಗೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಭಾರೀ ಸಂಚಲನ ಮೂಡಿಸಿರುವ ಶಿವಂ ಅಸೋಸಿಯೇಟ್ಸ್ನ 4,500 ಕೋಟಿ ರೂ. ಹಗರಣದ ತನಿಖೆ ಸಿಐಡಿ ಕೈಯಲ್ಲಿದ್ದರೂ, ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಗಡಿಯಲ್ಲಿ ಕಷ್ಟಪಟ್ಟು ದೇಶ ಸೇವೆ ಸಲ್ಲಿಸಿ ಬಂದಿರುವ ಸಾಕಷ್ಟು ಮಾಜಿ ಸೈನಿಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಜೀವನೋಪಾಯಕ್ಕಾಗಿ ಶಿವಂ ಅಸೋಸಿಯೇಟ್ಸ್ನಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿರುವುದು ಸದ್ಯ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಸೈನಿಕರು ತಮ್ಮ ನಿವೃತ್ತಿ ಜೀವನದ ಭದ್ರತೆಗಾಗಿ ಹಾಗೂ ಒಳ್ಳೆಯ ಸದುದ್ದೇಶದಿಂದ ಈ ಹಣ ಹೂಡಿಕೆ ಮಾಡಿದ್ದರು. ಆದರೆ ಈಗ ಇಡೀ ಪ್ರಕರಣ ಸಿಐಡಿ ಅಂಗಳದಲ್ಲಿ ಇರುವುದರಿಂದ ಸೈನಿಕರ ಕಷ್ಟದ ದುಡಿಮೆ ಮುಳುಗುವ ಆತಂಕ ಎದುರಾಗಿದೆ ಎಂದು ಮಾಜಿ ಸೈನಿಕರ ಸಂಘದ ಮಹಾ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಗದೀಶ್ ಪುಜಾರಿ, “ಸರ್ಕಾರ ಮತ್ತು ಸಿಐಡಿ ಅಧಿಕಾರಿಗಳು ಹೂಡಿಕೆದಾರರ ಹಣವನ್ನು ಮರಳಿ ಕೊಡಿಸುವ ಪ್ರಕ್ರಿಯೆ ಆರಂಭಿಸಿದಾಗ, ಮೊದಲ ಹಂತದಲ್ಲೇ ಮಾಜಿ ಸೈನಿಕರನ್ನು ಪರಿಗಣಿಸಬೇಕು ಹಾಗೂ ಹಣ ಮರಳಿಸಲು ಮೊದಲ ಆದ್ಯತೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಅಧಿಕೃತ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಇದೇ ವೇಳೆ, ನಿವೃತ್ತ ಯೋಧರು ಇನ್ನುಮುಂದೆ ಇಂತಹ ಅನಧಿಕೃತ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡದೆ, ಕೇವಲ ಸರ್ಕಾರದ ಕಾನೂನುಬದ್ಧ ಬ್ಯಾಂಕ್ಗಳಲ್ಲಿ ಮಾತ್ರ ಹಣ ಹೂಡಿಕೆ ಮಾಡಿ ಜಾಗೃತರಾಗಿರಬೇಕು ಎಂದು ಒಕ್ಕೂಟವು ತನ್ನ ಸೈನಿಕರಲ್ಲಿ ವಿನಂತಿಸಿಕೊಂಡಿದೆ.
