BELAGAVI

ಜೂನ್ 2 ರೊಳಗೆ ನಿರ್ಣಯ ಪಾಸ್ ಮಾಡಿ, ಇಲ್ಲದಿದ್ದರೆ ಅಖಂಡ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಉಗ್ರ ಎಚ್ಚರಿಕೆ!

Share

ಬೆಳಗಾವಿ ಗಡಿ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದು ಬೆಳಗಾವಿಯಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಸರ್ಕಾರ ಹಾಗೂ ಮಹಾನಗರ ಪಾಲಿಕೆಗೆ ಗಡುವು ನೀಡಿದ್ದಾರೆ. ಜೂನ್ 2 ರೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಮತ್ತು ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಣಯ ಪಾಸ್ ಮಾಡದಿದ್ದರೆ, ರಾಜ್ಯಾದ್ಯಂತ ಕಂಡು ಕೇಳರಿಯದ ಕ್ರಾಂತಿ ಎದ್ದೇಳಲಿದ್ದು, ಮುಂಬರುವ ದಿನಗಳಲ್ಲಿ ‘ಅಖಂಡ ಕರ್ನಾಟಕ ಬಂದ್’ಗೆ ಕರೆ ನೀಡುವುದಾಗಿ ಗುಡುಗಿದ್ದಾರೆ.

ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಬೆಳಗಾವಿ ಮಹಾನಗರ ಪಾಲಿಕೆ ಗಂಡು ಮೆಟ್ಟಿದ ನಾಡು ಕರ್ನಾಟಕದಲ್ಲಿದ್ದು, ಜೂನ್ 2 ರೊಳಗೆ ಯಾವುದೇ ಪಕ್ಷದವರಾಗಿರಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಗಡಿವಿವಾದದಲ್ಲಿ ಮಹಾಜನ ವರದಿ ಅಂತಿಮ ಎಂಬ ನಿರ್ಣಯ ಪಾಸು ಮಾಡಬೇಕು. ಇಲ್ಲದಿದ್ದರೇ, ಬೆಳಗಾವಿಯಲ್ಲಿ ಕಂಡರಿಯದಂತಹ ಕ್ರಾಂತಿಯಾಗುತ್ತದೆ. ಜೂನ್ 4 ರಂದು ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ಸಭೆಯನ್ನು ಕರೆಯಲಾಗಿದ್ದು, ಅಂತಿಮ ಚರ್ಚೆ ನಡೆಸಿ ಮುಂಬರುವ ದಿನಗಳಲ್ಲಿ ಅಖಂಡ ಕರ್ನಾಟಕ ಬಂದ್’ಗೆ ಕರೆ ಕೊಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಇನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಹಲ್ಮಿಡಿ ಶಾಸನದ ಪ್ರತಿಕೃತಿ ಸ್ಥಾಪಿಸಿ ಜಲಾಭಿಷೇಕ, ಕ್ಷೀರಾಭಿಷೇಕ ಮಾಡಿದ್ದು, ಸಂತಸ ತಂದಿದೆ. ಬೆಳಗಾವಿ ಮಹಾಪೌರರು ನಿರ್ಣಯ ಪಾಸು ಮಾಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ನಾವು ಸರ್ಕಾರದೊಂದಿಗೆ ಮಾತನಾಡುತ್ತೇವೆ. ಸರ್ಕಾರ ಕಣ್ಮುಚ್ಚಿ ಕುಳಿತಿದೇಯೆ? ಸಿದ್ಧರಾಮಯ್ಯನವರು ಹುಡುಗಾಟ ಮಾಡುತ್ತಿದ್ದಾರೆಯೇ? ಕೂಡಲೇ ಅಲ್ಲಿ ನಿರ್ಣಯ ಮಾಡಿ. ಇಲ್ಲದಿದ್ದರೇ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್’ಸೀಡ್ ಮಾಡಲೇಬೇಕು ಎಂದು ಒತ್ತಾಯಿಸಿದರು.

ಇನ್ನೋರ್ವ ಹೋರಾಟಗಾರರು ಮಾತನಾಡಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಹಲ್ಮಿಡಿ ಶಾಸನವನ್ನು ಅನಾವರಣಗೊಳಿಸಿದ್ದು, ಸಂತಸ ತಂದಿದೆ. ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಪಾಸ್ ಮಾಡಲು ಒತ್ತಾಯಿಸಿ ಸುಮಾರು 20 ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ. ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಈ ಚಳುವಳಿ ಮುಂದುವರೆಯಲಿದೆ ಎಂದರು.

Tags:

error: Content is protected !!