Udupi

ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿಂ ಮಹಿಳೆಯರು ! ಇದು ನಮ್ಮ ಭಾರತ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿ ಅಪರೂಪದ ಘಟನೆಗೆ ಸಾಕ್ಷಿ

Share

35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಮನೆ ಕಟ್ಟಲಾಗದೆ ದಿಕ್ಕೆಟ್ಟು ಹೋಗಿದ್ದ ವಿಧವೆ ಹಿಂದು ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ ಅಪರೂಪದ ಪ್ರಸಂಗ ಉಡುಪಿಯಲ್ಲಿ ನಡೆದಿದೆ. ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದು – ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯಸ್ಕ ಮಹಿಳೆ ಗಂಡನನ್ನು ಕಳಕೊಂಡಿದ್ದು ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ಇವರಿಗೆ 1989ರಲ್ಲಿ ಭೂರಹಿತರಿಗೆ ವಿತರಿಸಲಾಗುವ ವಸತಿ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿತ್ತು. ಇದರ ಹಕ್ಕುಪತ್ರವನ್ನೂ ಮಹಿಳೆಗೆ ನೀಡಲಾಗಿತ್ತು. ಆದರೆ ಆ ಭೂಮಿ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯ ಅಧಿಕಾರಿಗಳು ವಾಸ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಹಿಳೆಯ ಸ್ವಾಧೀನಕ್ಕೆ ಬಿಟ್ಟು ಕೊಡಲು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಮಹಿಳೆ ಹೋರಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಬಡ ಮಹಿಳೆಯಾಗಿದ್ದರಿಂದ ಭೂಮಿಯ ವಾಸ್ತವ್ಯ ಸಿಗದೆ ಮನೆಯನ್ನೂ ಕಟ್ಟಲಾಗದೆ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಕಾನೂನು ಪ್ರಕಾರ ಭೂಮಿಯ ವಾಸ್ತವ್ಯ ಪಡೆಯಲು ನೆರೆಮನೆಯ ಸಲಹುದ್ದೀನ್ ಎಂಬವರ ಮನೆಯ ಕುಟುಂಬಸ್ಥರು ಗಿರಿಜಾ ಅವರನ್ನು ಹಲವು ಅಧಿಕಾರಿಗಳ ಬಳಿಗೆ ಕರೆದೊಯ್ದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಈಗ ಜಾಗ ಸ್ವಂತದ್ದು ಇದ್ದರೆ ಮನೆ ಕಟ್ಟಿಕೊಡಲು ನೆರವು ಕೊಡುವ ಉದಾರಿಗಳಿದ್ದಾರೆ, ಆದರೆ ಹಕ್ಕುಪತ್ರ ಇದ್ದರೂ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.

ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಗೆಸ್ಟ್ ಹೌಸ್ ಬಳಿಗೆ ಇಬ್ಬರು ಮುಸ್ಲಿಂ ಮಹಿಳೆಯರು, ಹಿಂದು ಬಡ ಮಹಿಳೆಗೆ ನೆರವಾಗಿ ಎಂದು ಕೇಳಿಕೊಂಡು ಬಂದಿದ್ದು ಸಚಿವರ ಬಳಿ ಅಹವಾಲು ಮಂಡಿಸಿದ್ದಾರೆ. ನಮಗೇನೂ ಬೇಡ, ಆ ಮಹಿಳೆಗೆ ಒಂದು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇದನ್ನು ಕೇಳಿದ ಸಚಿವರು, ಇದು ನೋಡಿ ನಮ್ಮ ಭಾರತ. ಬಡ ಹಿಂದು ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಮಹಿಳೆಯ ಪರವಾಗಿ ಭೂಮಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Tags:

error: Content is protected !!