ವಿಜಯಪುರ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಶೋಧ ನಡೆಸಿದ್ದು, ಭಾರಿ ಅಕ್ರಮ ಮತ್ತು ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ. ಶೋಧನೆ ವೇಳೆ ಕಾರ್ಮಿಕರಿಗೆ ನೀಡಬೇಕಾದ 44 ಸಾವಿರ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸದೇ ಕಚೇರಿಯಲ್ಲೇ ಇಟ್ಟುಕೊಂಡಿರುವುದು ಪತ್ತೆಯಾಗಿದೆ ಎಂದು ವಿಜಯಪುರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ್ ತಿಳಿಸಿದ್ದಾರೆ. ಕಾರ್ಮಿಕರಿಗೆ ನೀಡಬೇಕಾಗಿದ್ದ ₹1.10 ಕೋಟಿ ಹಣವನ್ನು ಕಳೆದ ಹಲವು ವರ್ಷಗಳಿಂದ ಇಲಾಖೆಯಲ್ಲೇ ಉಳಿಸಿಕೊಂಡಿ ರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ. ಕಾರ್ಮಿಕರ 1,233 ಅರ್ಜಿಗಳನ್ನು ಬಾಕಿ ಇರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ಅಪಘಾತದಿಂದ ಮೃತಪಟ್ಟ ಅರ್ಜಿಗಳು, ಹೆರಿಗೆ ಸೌಲಭ್ಯದ ಅರ್ಜಿಗಳು, ಬಾಲ ಕಾರ್ಮಿಕರ ಪ್ರಕರಣಗಳಲ್ಲಿ ಕ್ರಮಕೈಗೊಳ್ಳದಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.


ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ವ್ಯಾಪಕವಾಗಿ ಅವ್ಯವಹಾರ ಮತ್ತು ಭ್ರಷ್ಟಾಚಾರ ಆರೋಪಗಳ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾರ್ಮಿಕ ಇಲಾಖೆಯಯನ್ನು ಶೋಧನೆ ಮಾಡಲು ವಾರೆಂಟ್ ಹೊರಡಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಮತ್ತು ಮೂವರು ಪೊಲೀಸ್ ಇನ್‌ಸ್ಪೆಕ್ಟರ್ ಒಳಗೊಂಡ ತಂಡವು ಎರಡು ದಿನಗಳಿಂದ ಶೋಧನೆ ಕೈಗೊಂಡಿದ್ದು, ದಾಖಲೆಗಳ ಪರಿಶೀಲನೆ ಇನ್ನೂ ಬಾಕಿ ಇದ್ದು, ಶೋಧನಾ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಮಲ್ಲಿಕಾರ್ಜುನ ಎಸ್.ತುಳಸಿಗೇರಿ, ಪೊಲೀಸ್ ನಿರೀಕ್ಷಕರಾದ ಆನಂದ ಟಕ್ಕನ್ನವರ, ಆನಂದ ದೋಣಿ, ನಿಂಗಪ್ಪ ಪೂಜೇರಿ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.


