ಬೆಳಗಾವಿ: ಗೋವಾದ ಕಲಿಂಗಡ್‌ನಲ್ಲಿ ಬರೋಡಾ ಫುಟ್ಬಾಲ್ ಅಕಾಡೆಮಿ ಆಯೋಜಿಸಿರುವ 14 ವರ್ಷದೊಳಗಿನವರ ‘ಸ್ಪೋರ್ಟಿಂಗ್ ಗೋವಾ ಫುಟ್ಬಾಲ್ ಫೆಸ್ಟಿವಲ್’ನಲ್ಲಿ ಬೆಳಗಾವಿಯ ಮಾನಸ್ ಫುಟ್ಬಾಲ್ ಅಕಾಡೆಮಿ ಅದ್ಭುತ ಪ್ರದರ್ಶನ ನೀಡಿ ಉಪಾಂತ್ಯ ಹಂತಕ್ಕೆ ಪ್ರವೇಶಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಬರೋಡಾ ಕ್ಲಬ್ ವಿರುದ್ಧ 7-3 ಅಂತರದ ಭರ್ಜರಿ ಗೆಲುವು ಸಾಧಿಸಿದ ಮಾನಸ್ ಅಕಾಡೆಮಿ ಪರ ಹುಸೇನ್ ಜಮಾದಾರ್ ಹ್ಯಾಟ್ರಿಕ್ ಸೇರಿ 5 ಗೋಲು ಬಾರಿಸಿ ಮಿಂಚಿದರು. ಎರಡನೇ ಪಂದ್ಯದಲ್ಲಿ ಸೋಲಾಪುರ ಅಕಾಡೆಮಿಯನ್ನು 4-1 ರಿಂದ ಸದೆಬಡಿದರೆ, ಮೂರನೇ ಪಂದ್ಯದಲ್ಲಿ ಗೋವಾದ ಸೈಂಟ್ ಜೋಸೆಫ್ ತಂಡವನ್ನು 6-0 ಗೋಲುಗಳ ಏಕಪಕ್ಷೀಯ ಅಂತರಿಂದ ಮಣಿಸಿ ಅಜೇಯರಾಗಿ ಉಳಿದಿದ್ದಾರೆ.

ವಿಜೇತ ತಂಡದ ಪರ ಅನಿ ಕೇತ್ ಪಾಟೀಲ್, ಹುಜೇಫಾ ಅಥಣಿ ಹಾಗೂ ಪ್ರಣವ್ ಪಿಲ್ಲೈ ಅದ್ಭುತ ಗೋಲುಗಳ ಕೊಡುಗೆ ನೀಡಿದ್ದಾರೆ. ಸದ್ಯ ಟೂರ್ನಿಯಲ್ಲಿ ಸರಣಿ ಜಯಭೇರಿ ಬಾರಿಸಿರುವ ಮಾನಸ್ ಫುಟ್ಬಾಲ್ ಅಕಾಡೆಮಿಯು ಭಾನುವಾರ (ಮೇ 17) ಮುಂಜಾನೆ 8 ಗಂಟೆಗೆ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೋವಾದ ಎಂ.ಬಿ.ಬಿ.ಎಸ್ ತಂಡವನ್ನು ಎದುರಿಸಲಿದ್ದು, ಗಡಿಭಾಗದ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

