BELAGAVI

ಬೆಳಗಾವಿ: ಮುಚಂಡಿ ಜಾತ್ರಾ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ; ಮೇ 18ಕ್ಕೆ ಅಂತರರಾಷ್ಟ್ರೀಯ ಕುಸ್ತಿ!

Share

“ಬೆಳಗಾವಿ ಗ್ರಾಮೀಣ ಭಾಗದ ಪ್ರಸಿದ್ಧ ಮುಚಂಡಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಹಾಗೂ ಶ್ರೀ ಮರಗಾಯಿ ದೇವಿಯರ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರಗುತ್ತಿದ್ದು, ಕೇವಲ ನಾಲ್ಕೇ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯರ ದರ್ಶನ ಪಡೆದಿದ್ದಾರೆ.
ಬೆಳಗಾವಿ ತಾಲೂಕಿನ ಮುಚಂಡಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ಮರಗಾಯಿ ದೇವಿಯರ ಜಾತ್ರಾ ಮಹೋತ್ಸವದ ವೈಭವ ಮುಗಿಲು ಮುಟ್ಟಿದೆ. ಇಂದು ಶನಿವಾರದಂದು ಜಾತ್ರೆಯು ಯಶಸ್ವಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ನಾಲ್ಕು ದಿನಗಳಲ್ಲಿ ಬರೋಬ್ಬರಿ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಿಯರ ದರ್ಶನ ಪಡೆದು ಪುನೀತರಾಗಿದ್ದಾರೆ. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದೇವಸ್ಥಾನ ಕಮಿಟಿಯ ವತಿಯಿಂದ ಭಕ್ತರಿಗಾಗಿ ದಾಸೋಹ ಮತ್ತು ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರಾ ಕಮಿಟಿಯ ಪ್ರಮುಖರು ನೀಡಿರುವ ಮಾಹಿತಿಯ ಪ್ರಕಾರ, ಈ ಧಾರ್ಮಿಕ ಉತ್ಸವವು ಮುಂದಿನ ಐದು ದಿನಗಳ ಕಾಲ ಸತತವಾಗಿ ಮುಂದುವರಿಯಲಿದೆ. ಮುಂಬರುವ ದಿನಗಳಲ್ಲೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಐದು ದಿನಗಳ ಕಾಲ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ಹಾಗೂ ಸಾರ್ವಜನಿಕರ ಮನರಂಜನೆಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯನ್ನೇ ಆಯೋಜಿಸಲಾಗಿದೆ.

ಈ ಬಾರಿಯ ಜಾತ್ರಾ ಮಹೋತ್ಸವದ ಅತ್ಯಂತ ಪ್ರಮುಖ ಮತ್ತು ಮೆಗಾ ಆಕರ್ಷಣೆಯಾಗಿ ಮುಂಬರುವ ಮೇ 18ರ ಸೋಮವಾರದಂದು ಭವ್ಯವಾದ ‘ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿ’ಯನ್ನು ಹಮ್ಮಿಕೊಳ್ಳಲಾಗಿದೆ. ಈ ರೋಮಾಂಚಕ ಆಖಾಡದಲ್ಲಿ ದೇಶ ಮತ್ತು ವಿದೇಶಗಳ ಖ್ಯಾತನಾಮ ಪೈಲ್ವಾನರು ಭಾಗವಹಿಸಿ ಸೆಣಸಾಡಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಕುಸ್ತಿ ಅಭಿಮಾನಿಗಳಿಗೆ ಈ ಪಂದ್ಯಾವಳಿಯು ಭರ್ಜರಿ ಹಬ್ಬದೂಟವಾಗಲಿದ್ದು, ಪ್ರಮುಖ ಆಕರ್ಷಣೆಯಾಗಿ ಮೂಡಿಬರಲಿದೆ.

Tags:

error: Content is protected !!