1. ಜನ್ಮ ನೀಡಿದ ತಾಯಿಯ ಅಂತ್ಯಕ್ರಿಯೆಗೆ ಬಾರದ ಪಾಪಿ ಮಕ್ಕಳು
2. ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಸಮಾಜಸೇವಕರು
3. ಬೆಳಗಾವಿಯ ಶಾಹುನಗರ ವೃದ್ಧಾಶ್ರಮದಲ್ಲಿ ನಡೆದ ಕರುಣಾಜನಕ ಘಟನೆ
4. ರಕ್ತ ಸಂಬಂಧಗಳಿಗಿಂತ ಮಾನವೀಯತೆಯೇ ದೊಡ್ಡದು ಎಂದು ಸಾಬೀತುಪಡಿಸಿದ ಯುವಕರು

ಹೆತ್ತ ತಾಯಿಯ ಋಣ ತೀರಿಸಬೇಕಾದ ಮಕ್ಕಳು, ಆಕೆ ಮೃತಪಟ್ಟಾಗ ಅಂತಿಮ ದರ್ಶನಕ್ಕೂ ಬಾರದೆ ಕ್ರೌರ್ಯ ಮೆರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಬ್ಬರು ಗಂಡು ಮಕ್ಕಳಿದ್ದರೂ ವೃದ್ಧಾಶ್ರಮದಲ್ಲಿ ಅನಾಥವಾಗಿ ಮೃತಪಟ್ಟ ವೃದ್ಧೆಯ ಅಂತ್ಯಕ್ರಿಯೆ ಮಾಡಲು ಮಕ್ಕಳು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ದೇವದೂತರಂತೆ ಆಗಮಿಸಿದ ಸಮಾಜಸೇವಕರು ತಾವೇ ಮಕ್ಕಳಾಗಿ ನಿಂತು ಅಜ್ಜಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಾನವೀಯತೆ ಮರೆಯಾಗುತ್ತಿರುವ ಈ ಕಾಲದಲ್ಲಿ ಬೆಳಗಾವಿ ನಗರವು ಸಾಕ್ಷಿಯಾದ ಕರುಣಾಜನಕ ಘಟನೆಯೊಂದು ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ಮೂಲತಃ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮೊನೆ ಎಂಬ ವೃದ್ಧೆ, ಮಕ್ಕಳಿದ್ದೂ ಅನಾಥರಾಗಿ ಶಾಹುನಗರದ ವೃದ್ಧಾಶ್ರಮದಲ್ಲಿ ವಾಸವಿದ್ದರು. ವಯೋಸಹಜ ಕಾಯಿಲೆಯಿಂದ ಅವರು ಮೃತಪಟ್ಟಾಗ, ವೃದ್ಧಾಶ್ರಮದವರು ಅವರ ಇಬ್ಬರು ಮಕ್ಕಳಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಆ ಪಾಪಿ ಮಕ್ಕಳು ತಾಯಿಯ ಸಾವಿನ ಸುದ್ದಿ ಕೇಳಿಯೂ ದುಃಖ ಪಡದೆ, “ನಾವ್ಯಾರೂ ಬರುವುದಿಲ್ಲ, ನೀವೇ ಅಂತ್ಯಕ್ರಿಯೆ ಮಾಡಿ” ಎಂದು ಹೇಳಿ ಫೋನ್ ಕಟ್ ಮಾಡುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ.
ಮಕ್ಕಳ ಈ ವರ್ತನೆಯಿಂದ ಕಂಗಾಲಾದ ವೃದ್ಧಾಶ್ರಮದ ಸಿಬ್ಬಂದಿ ಕೂಡಲೇ ನಗರಸೇವಕ ಶಂಕರ ಪಾಟೀಲ ಮತ್ತು ಸಮಾಜಸೇವಕ ಗಂಗಾಧರ ಪಾಟೀಲ ಅವರಿಗೆ ವಿಷಯ ತಿಳಿಸಿದರು. ತಡಮಾಡದೆ ಸ್ಥಳಕ್ಕೆ ಧಾವಿಸಿದ ಇವರು, ಆ ವೃದ್ಧೆಯನ್ನು ತಮ್ಮದೇ ತಾಯಿ ಎಂದು ಭಾವಿಸಿ ಅಂತ್ಯಕ್ರಿಯೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ಗಂಗಾಧರ ಪಾಟೀಲ ಮತ್ತು ಶಂಕರ ಪಾಟೀಲ ಅವರಿಗೆ ನಿಖಿಲ್ ಅಪ್ಪುಗೋಳ ಹಾಗೂ ಸ್ಮಶಾನ ಭೂಮಿಯ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಜನ್ಮ ನೀಡಿದ ಮಕ್ಕಳು ಮಾಡದ ಕೆಲಸವನ್ನು ಸಮಾಜಸೇವಕರು ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದ್ದಾರೆ. ಇತ್ತ ಅಂತಿಮ ದರ್ಶನಕ್ಕೆ ಬಾರದ ಮಕ್ಕಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
