Chikkodi

ಶಾಲೆಯ ಜಾಗೆ ದುರ್ಬಳಕೆ ಆರೋಪ: ಚಿಕ್ಕೋಡಿಯಲ್ಲಿ ಕರವೇಯಿಂದ ಬೃಹತ್ ಪ್ರತಿಭಟನೆ

Share

ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಜಾಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ನಾಗರಿಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಶಾಲೆಯ ಜಾಗೆಯನ್ನು ಅತಿಕ್ರಮಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಸಂಜು ಬಡಿಗೇರ ಅವರು, ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಾಗಿ ಸರ್ಕಾರಿ ಶಾಲೆಯ ಜಾಗೆಯಲ್ಲಿ ರಸ್ತೆ ನಿರ್ಮಿಸಿ ಅವರಿಗೆ ಮಣೆ ಹಾಕುತ್ತಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ ಎಂದು ಕಿಡಿಕಾರಿದರು. ಯಾವುದೇ ಕಾರಣಕ್ಕೂ ಸರ್ಕಾರಿ ಕನ್ನಡ ಶಾಲೆಯ ಆಸ್ತಿಯನ್ನು ಬಿಟ್ಟುಕೊಡುವುದಿಲ್ಲ, ರಸ್ತೆಯನ್ನು ಬೇರೆಡೆಗೆ ನಿರ್ಮಿಸಬೇಕು ಮತ್ತು ಈಗ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಕಾಮಗಾರಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಅವರು ಮಾತನಾಡಿ, ಸರ್ಕಾರಿ ಆಸ್ತಿಗಳ ಅತಿಕ್ರಮಣ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಹುಡುಕುವ ಸ್ಥಿತಿ ಎದುರಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಸುಭಾಷ್ ಬಾಳಿಕಾಯಿ, ರಾಜೇಂದ್ರ ಕಾಂಬಳೆ, ರಜನಿಕಾಂತ ಬಡಿಗೇರ, ಮೊಷಿನ್ ಪಟೇಲ, ರಶೀದ ಮಕಾನದಾರ, ರಫೀಕ್ ಪಠಾಣ, ರಮೇಶ ಡಂಗೇರ, ಅಮೂಲ ನಾವಿ, ಪಾರೀಶ ಬಾಳಿಕಾಯಿ, ಶಂಕರ ಚೌಕ, ಚಿದಾನಂದ ಚೌಗಲಾ, ಸಾತ್ವಿರ ಕಟ್ಟಿ, ಸುರೇಶ ಪೂಜಾರಿ, ಅಣ್ಣಪ್ಪ ಪೂಜಾರಿ, ಸಾಗರ ನಿಂಗಾಗೋಳ, ಸುರೇಶ, ಚನ್ನಪ್ಪ ಮಂಟೂರ ಸೇರಿದಂತೆ ಹಲವಾರು ಕನ್ನಡ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!