ಮಹಾರಾಷ್ಟ್ರದ ಧಾರಶಿವ ಜಿಲ್ಲೆಯ ತುಳಜಾಪುರ ಅಂಬಾಭವಾನಿ ದೇವಿಯು ಉತ್ತರ ಕರ್ನಾಟಕದ ಜಿಲ್ಲೆಗಳ ಭಕ್ತರ ಆರಾಧ್ಯ ದೇವತೆಯಾಗಿದ್ದಾಳೆ. ವಿಶೇಷವಾಗಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ವಿಜಯಪುರ, ಬೀದರ, ಬೆಳಗಾವಿ,ಕಲಬರುಗಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಮೂಲಕ ತೆರಳುತ್ತಾರೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಕರ್ನಾಟಕದಿಂದ ಮಹಾರಾಷ್ಟ್ರದವರೆಗೆ 250 ಕಿ.ಮೀ ಪಾದಯಾತ್ರೆ ನಡೆಸುತ್ತಿದ್ದಾರೆ ಇನ್ನೂ ವಿಜಯಪುರ ಜಿಲ್ಲೆಯ ಭಕ್ತರು ಕೂಡಾ 55 ಕೀಮಿ ಪಾದಯಾತ್ರೆ ನಡೆಸಿ ಜಗನ್ಮಾತೆ ತುಳಜಾಭವಾನಿ ದರ್ಶನ ಪಡೆಯುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ವಿಜಯಪುರ ಜಿಲ್ಲೆಯ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಸೇರಿದಂತೆ ಅಕ್ಕಪಕ್ಕ ಜಿಲ್ಲೆಗಳಿಂದ ಭಕ್ತರ ದಂಡು ‘ಆಯಿ ರಾಧಾ ಉಧೋ, ಉಧೋ, ಅಂಬಾಭವಾನಿ ಮಾತಾಕಿ ಜಯ ‘ ಎಂಬ ನಾಮಘೋಷಗಳೊಂದಿಗೆ ತುಳಜಾಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ಶಕ್ತಿಪೀಠ ಗಳಲ್ಲೊಂದಾದ ಹಾಗೂ ಶಿವಾಜಿ ಮಹಾರಾಜರಿಗೆ ಖಡ್ಗ ನೀಡಿದ ಕುಲದೇವತೆ ಅಂಬಾಭವಾನಿ ಕರ್ನಾಟಕದ ಅರ್ಧದಷ್ಟು ಜನರ ಕುಲದೇವತೆಯೂ ಆಗಿದ್ದಾಳೆ. ಈ ಶಕ್ತಿಸ್ವರೂಪಿಣಿಯ ಜಾತ್ರೆಯು ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯಿಂದ ಸೀಗಿ ಹುಣ್ಣಮೆವರೆಗೆ ನಡೆಯುತ್ತಿದೆ. ರಾಜ್ಯದಿಂದ ಭಕ್ತರು ದೇವಿ ದರುಶನಕ್ಕೆ ನಿರಂತರವಾಗಿ ತೆರಳುತ್ತಾರೆ. ಇನ್ನೂ ಪಾದಯಾತ್ರಿಕ ಭಕ್ತಾದಿಗಳಿಗೆ ಸ್ವಯಂ ಸೇವಕರು, ಸಂಘಟನೆಗಳು, ದೇವಿ ಹೆಸರಿನಲ್ಲಿರುವ ಸಮಿತಿಗಳು, ರಾಜಕೀಯ ಮುಖಂಡರು, ಉದ್ಯಮಿ-ವ್ಯಾಪಾರಿಗಳು ಹೆದ್ದಾರಿ ಪಕ್ಕದಲ್ಲಿ, ರಸ್ತೆಗಳಲ್ಲಿ ಪಾದಯಾತ್ರಿಗಳಿಗೆ ಅನ್ನದಾಸೋಹ ಇತರೆ ವ್ಯವಸ್ಥೆ ಕಲ್ಪಿಸಿರುತ್ತಾರೆ.
ತುಳಜಾಪುರದ ಅಂಬಾಭವಾನಿ ದರ್ಶನಕ್ಕೆ ತೆರಳುವ ಭಕ್ತರಿಗೆ ಸೋಲಾಪುರ ರೂಪಾಭವಾನಿ ದೇವಸ್ಥಾನದಿಂದ ಪ್ರಾರಂಭವಾಗಿ ಪ್ರತಿ ಎರಡು ಕಿಲೋಮೀಟರ್ ಅಂತರದಲ್ಲಿ ಪಾದಯಾತ್ರಿಗಳಿಗೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು
ಮಸಾಲಾ ರೈಸ್, ಬಾಳೆಹಣ್ಣು, ಚುಡಾ,ಉಪ್ಪಿಟ್ಟು, ಸೀರಾ,ಅನ್ನ, ಚಹಾ-ಬಿಸ್ಕಿಟ್, ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದ್ದಾರೆ. ಶೀಗಿ ಹುಣ್ಣುಮೆ ಯಂದು ತುಳಜಾಪುರದಲ್ಲಿ ದೇವಿಯನ್ನು ಜಾಗೃತಗೊಳಿಸಿ ದೇವಿಗೆ ಅಭಿಷೇಕ ಮಾಡಲಾಗುತ್ತದೆ. ಈ ಪೂಜೆಯಲ್ಲಿ ಭಾಗವಹಿಸಲು ಕನಿಷ್ಠ ಇಪ್ಪತ್ತು ಲಕ್ಷ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಹಾಗೂ ಪೂಜೆಯಲ್ಲಿ ಭಾಗವಹಿಸುವದರಿಂದ ತುಳಜಾಪುರ ಕಂಗೊಳಿಸುತ್ತಿದೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಮರಾಠಿ ನೆಲದಲ್ಲಿ ಕನ್ನಡ ಭಾಷೆ ಝೇಂಕರಿಸುತ್ತಿದೆ. ಇನ್ನೂ ಮಹಾರಾಷ್ಟ್ರದ ದಲ್ಲಿ ರಕ್ಕಸ ಮಳೆಯಿಂದ ಬೆಳೆ ಹಾಳಾಗಿದ್ದು ಮಹಾರಾಷ್ಟ್ರ ಜನಪ್ರತಿನಿಧಿಗಳು ತುಳಜಾಭವಾನಿ ದರ್ಶನ ಪಡೆದು ರಕ್ಷಿಸಮ್ಮಾ ಎಂದು ಹರಕೆ ಹೊರುತ್ತಿದ್ದಾರೆ.
ಒಟ್ಟಾರೆ, ವಿಜಯಪುರ, ಸೋಲಾಪುರ ಸೇರಿದಂತೆ ಎರಡು ರಾಜ್ಯಗಳ ನಾನಾ ಗ್ರಾಮಗಳ ಜನತೆ ತುಳಜಾಪುರ ಪಾದಯಾತ್ರೆ ನಡೆಸಿದರು. ನೂರಾರು ಭಕ್ತರಿಗೆ ವಿಶ್ರಾಂತಿ ಮಾಡಲು ಟೆಂಟ್ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಸವಕಲ್ಯಾಣದ ಯುವಕರು ಪಾದಯಾತ್ರಿಗಳಿಗೆ ಅನ್ನ ದಾಸೋಹ ಸೇವೆ ಮಾಡುವ ಮೂಲಕ ಪಾದಯಾತ್ರಿಗಳ ಸೇವೆ ಮಾಡುತ್ತಿದ್ದಾರೆ. ಇನ್ನೂ ನಾಳೆ ತುಳಜಾಭವಾನಿ ದೇವಿ ಜಾಗೃತವಾಗಳಿದ್ದು ನಾಳೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

