ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ. ನಮಗಿಂತಲೂ ಬಿಜೆಪಿಯವರ ಸರ್ಕಾರವಿದ್ದಾಗಲೇ ಹೆಚ್ಚು ಕೊಲೆಗಳಾಗಿವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿರುಗೇಟು ನೀಡಿದ್ದಾರೆ

ಬೆಂಗಳೂರಿನಲ್ಲಿ ಮಾಧ್ಯಮದವರು ಸುಹಾಸ್ ಶೆಟ್ಟಿ ಕುಟುಂಬವನ್ನು ಸರ್ಕಾರದ ಪರವಾಗಿ ಭೇಟಿ ಮಾಡಿ ಯಾರೂ ಸಾಂತ್ವನ ಹೇಳದಿರುವ ಕುರಿತು ಮಾಧ್ಯಮಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಒಂದು ಕೊಲೆ ಪ್ರಕರಣ, ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ’ ಎಂದರು.ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ಬಿಜೆಪಿ ನಾಯಕರ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಈ ಪ್ರಕರಣದಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿ ಈ ಪ್ರಕರಣ ಎನ್‌ಐಎಗೆ ಕೊಟ್ಟಿಲ್ಲ’ ಎಂದು ಸಮರ್ಥನೆ ನೀಡಿದರು.

ಇನ್ನು ಗೋಕಾಕ್’ನಲ್ಲಿಯೂ ಜನನಿಬೀಡ ಪ್ರದೇಶದಲ್ಲಿ ಯುವಕನ ಕೊಲೆ ಮಾಡಲಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಳು ಹೆಚ್ಚಾಗುತ್ತಿವೆ ಎಂಬ ಬಿಜೆಪಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಕೊಲೆಗಳು ಆಗಿವೆ’ ಎಂದರು.ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಕೊಲೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ‘ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೊಲೆ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದರೆ ತಡೆಯುವ ಕೆಲಸ ಆಗುತ್ತಿದೆ. ಕೊಲೆ ನಂತರವೂ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಎಲ್ಲ ಎಚ್ಚರಿಕೆ, ಸೂಚನೆಯನ್ನು ಎಸ್‌ಪಿಗಳಿಗೆ ಕೊಟ್ಟಿದ್ದೇವೆ’ ಎಂದರು.