ಖಾನಾಪೂರ: ತಾಲೂಕಿನ ಲೋಂಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರೊಂದಿಗೆ ತಾಲೂಕು ಪಂಚಾಯತ್ ಅಧಿಕಾರಿಗಳು ನರೇಗಾ ದಿನಾಚರಣೆ ಮಾಡಿದರು.

ಜಿಲ್ಲಾ ಪಂಚಾಯತ್ ಬೆಳಗಾವಿ, ತಾಲೂಕು ಪಂಚಾಯತ್ ಖಾನಾಪೂರ ಹಾಗೂ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾಉ) ರೂಪಾಲಿ ಬಡಕುಂದ್ರಿ ಅವರು, ನರೇಗಾ ಯೋಜನೆಯಡಿ ದುಡಿಯುವ ಕೂಲಿಕಾರರು ಕೂಲಿ ಪಡೆಯುವುದರ ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಕೂಡ ಪಡೆಯಬೇಕು ಎಂದು ಹೇಳಿದರು.

ಪರಿಸರದ ಮಧ್ಯೆ ಕೆಲಸ ಮಾಡುವ ನೀವೆ ಧನ್ಯರು. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು. ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ 100 ಮಾನವ ದಿನಗಳನ್ನು ಪೂರೈಸಿದ ಕೂಲಿಕಾರರಿಗೆ ಹೂಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಉಪಾಹಾರ ವಿತರಿಸಲಾಯಿತು.
ಕೂಲಿಕಾರರಾದ ಅನಕ್ಷರಸ್ತೆ ಮಾಲಾ ಜಕಮತ್ತಿ ಅವರು ಸುಮಧುರವಾಗಿ ಹಿಂದಿ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಾ ತಾಂತ್ರಿಕ ಸಂಯೋಜಕರಾದ ವಿಶ್ವನಾಥ ಹಟ್ಟಿಹೊಳಿ, ಪಿಡಿಓ ಬಾಲರಾಜ್ ಭಜಂತ್ರಿ, ಐಇಸಿ ಸಂಯೋಜಕರು, ಗ್ರಾಪಂ ಸದಸ್ಯರು ಹಾಗೂ 210 ಕೂಲಿಕಾರರು ಭಾಗವಹಿಸಿದ್ದರು.