Belagavi

ಬೆಳಗಾವಿ ಮಹಾನಗರ ಪಾಲಿಕೆ ಫುಲ್ ಆಕ್ಷನ್

Share

ಬೆಳಗಾವಿ ಮಹಾನಗರ ಪಾಲಿಕೆ ಈಗ ನಗರದ ಸೌಂದರ್ಯೀಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಫುಟ್‌ಪಾತ್ ಮತ್ತು ಹೋರ್ಡಿಂಗ್ಸ್ ತೆರವು ಬೆನ್ನಲ್ಲೇ, ಇಂದು ಹಿಂಡಲಗಾ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವ ಮೂಲಕ ಅತಿಕ್ರಮಣಕಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯು ಅತಿಕ್ರಮಣ ತೆರವುಗೊಳಿಸಲು ಈಗ “ಫುಲ್ ಆಕ್ಷನ್” ಮೋಡ್‌ಗೆ ಇಳಿದಿದೆ. ಮೊನ್ನೆಯಷ್ಟೇ ಫುಟ್‌ಪಾತ್ ಒತ್ತುವರಿ ಹಾಗೂ ನಿನ್ನೆ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದ ಮಹಾಪಾಲಿಕೆ, ಇಂದು ತನ್ನ ಕಾರ್ಯಾಚರಣೆಯನ್ನು ಗೂಡಂಗಡಿಗಳತ್ತ ಮುಂದುವರಿಸಿದೆ. ಪಾಲಿಕೆ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರ ನೇತೃತ್ವದ ವಿಶೇಷ ತಂಡವು ಬೆಳಗಾವಿಯ ಹಿಂಡಲಗಾ ಗಣೇಶ್ ಮಂದಿರದ ಹಿಂಭಾಗದ ರಸ್ತೆಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿತು. ಈ ವೇಳೆ ರಸ್ತೆ ಬದಿಯಲ್ಲಿ ತಲೆ ಎತ್ತಿದ್ದ ಸುಮಾರು 10 ರಿಂದ 15 ಅನಧಿಕೃತ ಗೂಡಂಗಡಿಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಯಿತು.

ಕಾರ್ಯಾಚರಣೆ ವೇಳೆ ಕೇವಲ ಗೂಡಂಗಡಿಗಳಷ್ಟೇ ಅಲ್ಲದೆ, ರಸ್ತೆಯ ಜಾಗವನ್ನು ಅತಿಕ್ರಮಿಸಿ ಅಳವಡಿಸಲಾಗಿದ್ದ ಬಾರ್‌ಗಳ ಫಲಕಗಳು ಹಾಗೂ ಬೃಹತ್ ಜಾಹೀರಾತು ಬೋರ್ಡ್‌ಗಳನ್ನು ಸಹ ಕಿತ್ತು ಹಾಕಲಾಯಿತು. ಈ ಸಂದರ್ಭದಲ್ಲಿ ಜೀವನೋಪಾಯಕ್ಕಾಗಿ ಹಾಕಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ವ್ಯಾಪಾರಿಗಳ ವಿರೋಧದ ನಡುವೆಯೂ ಮಹಾನಗರ ಪಾಲಿಕೆ ಸಿಬ್ಬಂದಿ ಅತಿಕ್ರಮಣ ತೆರವುಗೊಳಿಸಿ, ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Tags:

error: Content is protected !!