ಮನೆಗಳಲ್ಲಿ ಹಳೆಯದಾದ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ದೈವನಿಂದನೆ ಮಾಡುವುದನ್ನು ತಡೆಯಲು ಬೆಳಗಾವಿಯ ಸರ್ವ ಲೋಕ ಸೇವಾ ಫೌಂಡೇಶನ್ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಶಿವಬಸವ ನಗರದಲ್ಲಿ ರಾಶಿಗಟ್ಟಲೆ ಬಿದ್ದಿದ್ದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ, ಹುಕ್ಕೇರಿ ಶ್ರೀಗಳ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸುವ ಮೂಲಕ ವಿರೇಶ್ ಹಿರೇಮಠ ತಂಡ ಮಾದರಿಯಾಗಿದೆ.


ಬೆಳಗಾವಿಯ ಶಿವಬಸವ ನಗರದ ಶ್ರೀ ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ತಂದು ಹಾಕಿದ್ದ ರಾಶಿಗಟ್ಟಲೆ ದೇವರ ಹಳೆಯ ಫೋಟೋಗಳನ್ನು ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಇಂದು ಸಂಗ್ರಹಿಸಲಾಯಿತು. ಫೌಂಡೇಶನ್ನ ವಿರೇಶ್ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಧೂಳು ಹಿಡಿದು ಅನಾಥವಾಗಿ ಬಿದ್ದಿದ್ದ ಭಾವಚಿತ್ರಗಳನ್ನು ಭಕ್ತಿಯಿಂದ ಒಟ್ಟುಗೂಡಿಸಲಾಯಿತು. ಈ ಭಾವಚಿತ್ರಗಳನ್ನು ಎಲ್ಲೆಂದರಲ್ಲಿ ಎಸೆಯುವುದು ದೈವ ಶ್ರದ್ಧೆಗೆ ಧಕ್ಕೆ ತರುತ್ತದೆ ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಂಗ್ರಹಿಸಲಾದ ಈ ಎಲ್ಲಾ ಭಾವಚಿತ್ರಗಳನ್ನು ನಂತರ ಹುಕ್ಕೇರಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿಧಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ವಿರೇಶ್ ಹಿರೇಮಠ ಅವರು, “ದೇವರ ಫೋಟೋಗಳು ಹಳೆಯದಾದಾಗ ಅವುಗಳನ್ನು ರಸ್ತೆ ಬದಿಯಲ್ಲಿ, ಮರದ ಕೆಳಗೆ ಅಥವಾ ಚರಂಡಿ ಪಕ್ಕದಲ್ಲಿ ಎಸೆಯುವುದು ಸರಿಯಲ್ಲ. ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಶಾಂತ್ ದೇವನ, ಸುಭಾಷ್ ಪಾಟೀಲ್, ದೇವಪ್ಪ ಕಾಂಬಳೆ ಸೇರಿದಂತೆ ಫೌಂಡೇಶನ್ನ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
