ಕಾಂಗ್ರೆಸ್ ಪಕ್ಷ ಜಾತ್ಯಾತೀತ ಸಿದ್ಧಾಂತಕ್ಕೆ ಬದ್ಧವಾಗಿದೆ. ಬಿಜೆಪಿ ಪಕ್ಷ ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತ ಮಾಡಲು ಹೊರಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಎನ್ನುತ್ತಾರೆ, ಇದೊಂದು ರೀತಿ ಬಾಯಲ್ಲಿ ಬೆಣ್ಣೆ, ಕಂಕುಳಲ್ಲಿ ದೊಣ್ಣೆ ಎಂಬ ಗಾದೆ ಮಾತಂತೆ ಇದೆ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಹೇಳೋದು ಒಂದು, ಮಾಡೋದು ಅದಕ್ಕೆ ವಿರುದ್ಧವಾದ ಕೆಲಸ. ಹಿಜಾಬ್ ವಿವಾದಕ್ಕೆ ಕಾರಣವಾದ ಯಾವುದೇ ಸಂಘಟನೆ ಇದ್ದರೂ ಅದನ್ನು ಖಂಡಿಸುತ್ತೇನೆ. ಅದು ಆರ್‍ಎಸ್‍ಎಸ್ ಇರಲಿ, ಎಸ್‍ಡಿಪಿಐ ಇರಲಿ, ಭಜರಂಗ ದಳವಿರಲಿ, ಎಲ್ಲಾ ಮೂಲಭೂತವಾದಿ ಸಂಘಟನೆಗಳ ವಿರುದ್ಧ ನನ್ನ ಖಂಡನೆಯಿದೆ. ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ದೇಶದ್ರೋಹದ ಕೆಲಸ. ಯಾವ ಧರ್ಮ, ಜಾತಿಯವರೇ ಆದರೂ ಅವರಿಗೆ ಶಿಕ್ಷಣ ಸಿಗಬೇಕು ಎಂದರು.
ಸಂಘ ಪರಿವಾದವರು ಅನಗತ್ಯವಾಗಿ ಹಿಜಾಬ್ ವಿವಾದವನ್ನು ಹುಟ್ಟುಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆ ಆರಂಭವಾದುದ್ದಲ್ಲ, ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವರು ಧರಿಸುತ್ತಾರೆ, ಕೆಲವರು ಧರಿಸಲ್ಲ ಅದು ಮುಸ್ಲಿಂ ವಿದ್ಯಾರ್ಥಿಗಳ ವೈಯಕ್ತಿಕ ಆಯ್ಕೆ. ಹಿಜಾಬ್ ಧರಿಸುವುದರಿಂದ ಇತರರಿಗೆ ಯಾವ ತೊಂದರೆ ಕೂಡ ಆಗಲ್ಲ.
ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನ್ಯಾಯಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದೆ ಕೂಡ. ಧರ್ಮದ ಸಂಪ್ರದಾಯದ ಪ್ರಕಾರ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವ ತಕರಾರು ಇರಲಿಲ್ಲ. ಇದಕ್ಕೆ ಸಂವಿಧಾನ ಕೂಡ ಅವಕಾಶ ನೀಡಿದೆ, ಇದು ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.