ಗ್ರಾಮ ಸ್ವರಾಜ್ಯದ ಮೂಲ ಆಶಯವೇ ಗ್ರಾಮಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವುದು ಹಾಗೂ ಸರ್ಕಾರದಿಂದ ಬರುವ ಯೋಜನೆಗಳನ್ನು ಜನರಿಗೆ ತಿಳಿಸುವುದಾಗಿದೆ. ಆದ್ರೆ ಈ ತತ್ವಕ್ಕೆ ವಿರೋಧವಾಗಿ ನಡೆದುಕೊಂಡ ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಇಂದು ತಿರುಗಿ ಬಿದಿದ್ರು….
ಹೌದು, ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವಿನ ಮಾತಿನ ಚಕಮಕಿ, ಬಿಜೆಪಿ – ಕಾಂಗ್ರೆಸ್ ಸದಸ್ಯರ ಗದ್ದಲ, ಕೂಟಾಟ, ಮಧ್ಯೆ ಪ್ರವೇಶಿಸಿ ಶಾಂತ ಗೊಳಿಸಲು ಹರಸಾಹಸ ಪಡುತ್ತಿರುವ ಪೋಲಿಸರು ಈ ದೃಶ್ಯಗಳು ಕಂಡುಬಂದಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿಯಲ್ಲಿ.
ಅಂದಾಗೆ ಇಂದು ಗ್ರಾಮದ ಗ್ರಾಮ ದೇವತೆ ದೇವಸ್ಥಾನದಲ್ಲಿ ಅಧ್ಯಕ್ಷೆ ಹನುಮವ್ವ ಗೊಬ್ಬರಗುಂಪಿ ಅವರ ಅಧ್ಯಕ್ಷೆಯಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ವೇಳೆ ಗ್ರಾಮ ಪಿಡಿಓ ಪುಷ್ಪಾ ಮ್ಯಾದಾರ ಸಭೆಯ ನಡಾವಳಿಗಳನ್ನು ಓದಿ ಅನುಮೋದನೆ ಮುಂದಾಗಿದ್ರು, ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮದಲ್ಲಿ ಕೃಷಿ ಹೊಂಡ, ಬದವು ಸೇರಿದಂತೆ ಇನ್ನಿತರ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದರ ಬಗ್ಗೆ ಚರ್ಚಿಸಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿದ್ರು. ಈ ವೇಳೆ ಪಿಡಿಓ ಅಧಿಕಾರಿ ಆ ವಿಷಯವನ್ನು ಆನಂತರ ಚರ್ಚಿಸೋಣ ಸದ್ಯ ಗ್ರಾಮದಲ್ಲಿ ಮುಂದೆ ಆಗಬೇಕಿರುವ ಕಾಮಗಾರಿ ಕುರಿತು ಮಾತನಾಡೋಣ ಎಂದ್ರು. ಇದಕ್ಕೆ ಒಪ್ಪದ ಗ್ರಾಮಸ್ಥರು ಅವ್ಯವಹಾರ ಕುರಿತು ಮೊದಲು ಚರ್ಚೆಯಾಗಬೇಕೆಂದು ಪಟ್ಟು ಹಿಡಿದ್ರು…
ಗ್ರಾಮಸ್ಥರ ಮಾತಿಗೆ ಕೆಲ ಗ್ರಾಮ ಪಂಚಾಯತ್ ಸದಸ್ಯರು ಬೆಂಬಲ ಸೂಚಿಸಿದ್ರು, ಗ್ರಾಮದಲ್ಲಿ ಈ ಹಿಂದೆ ಇಂಗು ಗುಂಡಿ, ಬದವು, ಕೃಷಿ ಹೊಂಡ, 15 ನೇ ಹಣಕಾಸು, ಕುರಿ ದೊಡ್ಡಿ, ಸಿ.ಸಿ.ರಸ್ತೆ, ಗಟಾರ್ ನಿರ್ಮಾಣದಲ್ಲಿ ಬಾರಿ ಪ್ರಮಾಣದಲ್ಲಿ ಅವ್ಯವಹಾರ ಆಗಿದೆ. ಅದರಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಈ ಹಿಂದಿನ ಪಿಡಿಓನ ಕೈವಾಡವಿದೆ ಎಂದು ಆರೋಪಿಸಿದ್ರು. ಅವ್ಯವಹಾರ ನಡೆದ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು. ಆ ನಿಟ್ಟಿನಲ್ಲಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತಿ ಸದಸ್ಯರು ಒತ್ತಾಯಿಸಿದ್ರು…