ಯುವನಟ ಪ್ರದೀಪ್ ಅಭಿನಯದ ಯಲೋ ಬೋರ್ಡ್ ಚಲನಚಿತ್ರವು ರಾಜ್ಯಾದ್ಯಂತ ಮಾರ್ಚ್ 4ರಂದು ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ತ್ರಿಲೋಕ್ ರೆಡ್ಡಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ತ್ರಿಲೋಕ್ ರೆಡ್ಡಿ ಯಲೋ ಬೋರ್ಡ್ ಚಿತ್ರವು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಪುನೀತ್ ರಾಜ್‍ಕುಮಾರ್ ಅವರು ಹಾಡಿರುವ ಒಂದು ಹಾಡು ನಿರೀಕ್ಷೆ ಮೀರಿ ಹಿಟ್ ಆಗಿದೆ ಎಂದು ತಿಳಿಸಿದರು.
ಇದೇ ವೇಳೆ ಚಿತ್ರದ ನಾಯಕ ಪ್ರದೀಪ್ ಮಾತನಾಡಿ, ಪುನೀತ್ ರಾಜ್‍ಕುಮಾರ್ ಅವರು ಹಾಡಿರುವ ಹಾಡಿಗೆ ಯಾವುದೇ ಸಂಭಾವನೆ ಪಡೆಯಲಿಲ್ಲ. ಚಲನಚಿತ್ರವನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರದಲ್ಲಿ ಒಟ್ಟು 5 ಹಾಡುಗಳನ್ನು ಒಳಗೊಂಡಿದೆ. ಇದು ನನ್ನ 6ನೇ ಚಿತ್ರವಾಗಿದ್ದು, ಒಂದು ನಿಗೂಢ ಘಟನೆಯು ಪತ್ರಕರ್ತನನ್ನು ದುರದೃಷ್ಟಕರ ಬಲೆಗೆ ಸಿಲುಕಿಸುತ್ತದೆ.
ಹೀಗಾಗಿ ಸಾಮಾನ್ಯ ಕ್ಯಾಬ್ ಚಾಲಕನ ಅಸಾಧಾರಣ, ಕಥೆಯನ್ನು ತೆರೆದಿಡುತ್ತದೆ. ಅಲ್ಲದೇ ಕ್ಯಾಬ್ ಚಾಲಕರ ಜೀವನ ಮತ್ತು ಅವರ ಹೋರಾಟಗಳ ನಡುವೆ ಒಬ್ಬ ನಾಯಕ ಹೇಗೆ ಉದ್ಭವಿಸುತ್ತಾನೆ ಎನ್ನುವುದೇ ಚಿತ್ರದ ಸಾರಾಂಶವಾಗಿದೆ. ಹುಬ್ಬಳ್ಳಿಯಿಂದಾನೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಲೋ ಬೋರ್ಡ್ ಚಿತ್ರದಲ್ಲಿ ನಾಯಕಿಯಾಗಿ ಅಹಲ್ಯ ಸಿಂಗ್, ಸಾಧುಕೋಕಿಲ್, ಶ್ರೀನಿವಾಸ್ ಬಿಂದಿಗನವಾಲೆ, ಅಮಿತ್, ಭವಾನಿ ಪ್ರಕಾಶ್, ಗಿರಿ ಮಹೇಶ್, ಅಶ್ವಿನಿ ಕೊಡಂಗೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಚಾಲಕ ಸಂಘದ ಅಧ್ಯಕ್ಷರಾದ ಸೋನುಮನ್, ಕಾರ್ಯಕಾರಿ ನಿರ್ಮಾಪಕ ನವೀನಕುಮಾರ್.ಆರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.