Belagavi

ಕಣ್ಮನ ಸೆಳೆದ ಲಿಂಗಾಯತ ಮಹಿಳಾ ಸಮಾಜದ “ಜನಪದ ಸುಗ್ಗಿ ಸೌಗಂಧ” ಕಾರ್ಯಕ್ರಮ

Share

ಅಕ್ಷರದ ಅರಿವು ಆರಂಭವಾಗುವ ಮುನ್ನ ಹುಟ್ಟಿಕೊಂಡದ್ದು ಈ ಜನಪದ ಸಾಹಿತ್ಯ. ಜನಸಾಮಾನ್ಯರ ಮುಕ್ತ ವಿಶ್ವವಿದ್ಯಾಲಯ. ನಾಗರಿಕತೆಯ ಗಂಧ-ಗಾಳಿ ಗೊತ್ತಿಲ್ಲದ ಜನ ಅನಕ್ಷರಿರಬಹುದು, ಆದರೆ ಅವರು ಅವಿದ್ಯಾವಂತರಲ್ಲ. ನಮ್ಮ ದೇಶ ಜನಪದ ಅಕ್ಷಯ ಪಾತ್ರೆ ಎಂದು ಪೆÇ್ರ.ವಿಜಯಲಕ್ಷ್ಮೀ ಪುಟ್ಟಿ ಅಭಿಪ್ರಾಯ ಪಟ್ಟರು.

ಬೆಳಗಾವಿಯ ಶಿವಬಸವ ನಗರದ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಗೃಹದಲ್ಲಿ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಆಯೋಜಿಸಿದ್ದ ಜನಪದ ಸುಗ್ಗಿ ಸೌಗಂಧ ಸಾಂಸ್ಕøತಿಕ ಸಮಾರಂಭವು ಜಾನಪದ ಸೊಗಡನ್ನು ಎತ್ತಿ ತೋರುವದರೊಂದಿಗೆ ಸಾಹಿತ್ಯ ಸಿಂಚನವಾಗಿ ಕಂಗೊಳಿಸಿತು. ಇನ್ನು ಕಾರ್ಯಕ್ರಮದ ಆರಂಭದಲ್ಲಿ ಇತ್ತಿಚೆಗೆ ಅಗಲಿದ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜನಪದ ಮತ್ತು ಗ್ರಾಮೀಣ ಸೊಗಡನ್ನು ಬಿಂಬಿಸುವ ಅಲಂಕಾರ ಮತ್ತು ಉಡುಗೆ ತೊಡುಗೆಗಳನ್ನು ಮಹಿಳಾ ಮಣಿಗಳು ತೊಟ್ಟು ಎಲ್ಲರ ಗಮನ ಸೆಳೆದರು. ಲಿಂಗಾಯತ ಮಹಿಳಾ ಸಮಾಜದ ಮಾಸಿಕ ಕಾರ್ಯಕ್ರಮವು ವೈವಿಧ್ಯತೆ, ಕ್ರಿಯಾಶೀಲತೆ ಮತ್ತು ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ.ವಿಜಯಲಕ್ಷ್ಮೀ ಪುಟ್ಟಿ ಮಾತನಾಡಿ ಕನ್ನಡ ಜನಪದ ಸಾಹಿತ್ಯದಲ್ಲಂತೂ ಮಹಾಕಾವ್ಯಗಳೇ ಇವೆ. ಜನಪದರು ತಾವು ಅನುಭವಿಸಿದ ನೋವು-ನಲಿವು, ದುಃಖ-ದುಮ್ಮಾನ, ಆಸೆ-ನಿರಾಸೆಗಳ ಅನುಭವಗಳನ್ನು ಹಾಡುಕಟ್ಟಿ ಹಾಡಿದರು. ಅದು ಕಿವಿಯಿಂದ ಕಿವಿಗೆ ಹಾಡು, ಗೀತೆ, ಕಥೆ, ನೀತಿ, ಲಾವಣಿ, ಒಗಟು, ನಾಟಕ, ಆಚಾರ-ವಿಚಾರ, ಸಂಪ್ರದಾಯಗಳ ಮೂಲಕ ವ್ಯಾಪಕವಾಗಿದೆ ಎಂದು ಜನಪದ ಸಾಹಿತ್ಯ ಕುರಿತು ವಿವರವಾಗಿ ಮಾತನಾಡಿದರು.

ಇದೇ ವೇಳೆ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಾ ಮಸೂತಿ ಅವರು ರಚಿಸಿದ ಚದರಿ ನಿನ್ನ ಹಣಿಮ್ಯಾಗ ಕೃತಿಯನ್ನು ಕಾರಂಜಿಮಠದ ಗುರುಶಿದ್ಧ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಈ ಕೃತಿಯನ್ನು ಮಹಾಂತೇಶ ನಗರ ರಹವಾಸಿಗಳ ಸಂಘದ ಬಿ.ಎಡ್.ಮಹಾವಿದ್ಯಾಲಯದ ಪ್ರಾಚಾರ್ಯರು, ಸಾಹಿತಿಗಳೂ ಆಗಿರುವ ಡಾ.ನಿರ್ಮಲಾ ಬಟ್ಟಲ್ ಪರಿಚಯಿಸಿ, ಜನಪದ ಸಾಹಿತ್ಯದ ಮಹತ್ವವನ್ನು ತಿಳಿಸಿದರು.

ಬಳಿಕ ಲಿಂಗಾಯತ ಮಹಿಳಾ ಸಮಾಜದ ಸದಸ್ಯೆಯರು ಗೀಗಿ ಪದ ಮತ್ತು ವಿವಿಧ ಜನಪದ ಪ್ರಕಾರಗಳನ್ನೊಳಂಡ ನೃತ್ಯಗಳನ್ನು ಪ್ರದರ್ಶಿಸಿದರು. ಇತ್ತೀಚಿಗೆ ಅಗಲಿದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಅವರು ಹಾಡಿರುವ ಬೆಳ್ಳನೆ ಬೆಳಗಾಯಿತು ಕನ್ನಡ ಗೀತೆಗೆ ಸಂಯೋಜಿಸಲಾದ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿ, ಶ್ರೀಶೈಲ ಮಸೂತಿ, ಡಾ.ಗುರುದೇವಿ ಹುಲೆಪ್ಪನವರಮಠ, ನೀಲಗಂಗಾ ಚರಂತಿಮಠ, ಸಮಾಜದ ಗೌರವಾಧ್ಯಕ್ಷೆ ಶೈಲಜಾ ಭಿಂಗೆ, ಶೈಲಜಾ ಪಾಟೀಲ, ಜಯಶೀಲಾ ಬ್ಯಾಕೋಡ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಆಶಾ ಕಡಪಟ್ಟಿ, ಸಂಗೀತಾ ಅಕ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!