Uncategorized

ಕುಂದಾನಗರಿಯಲ್ಲಿ ಶಿವಬಸವ ಜಯಂತಿ ಸಂಭ್ರಮ… ಮೆರವಣಿಗೆ ಮಾರ್ಗ ಪರಿಶೀಲಿಸಿದ ಮಹಾಪೌರ-ಉಪಮಹಾಪೌರರು; ಸಕಲ ಸೌಲಭ್ಯ ಒದಗಿಸುವ ಭರವಸೆ

Share

• ಶಿವಬಸವ ಜಯಂತಿ ಸಿದ್ಧತೆ: ಅಧಿಕಾರಿಗಳ ಸಿಟಿ ರೌಂಡ್ಸ್
• ಮಾರ್ಗ ಮಧ್ಯದ ಸಮಸ್ಯೆಗಳ ನಿವಾರಣೆಗೆ ಸೂಚನೆ
• ಬೆಳಗಾವಿ ಮಹಾಪಾಲಿಕೆಯಿಂದ ಮೂಲಭೂತ ಸೌಕರ್ಯ ಸಜ್ಜು
• ಐತಿಹಾಸಿಕ ಮೆರವಣಿಗೆಗೆ ಕುಂದಾನಗರಿ ಹೈಟೆಕ್ ಸಿದ್ಧತೆ

ಬೆಳಗಾವಿಯಲ್ಲಿ ಏಪ್ರಿಲ್ 21 ರಂದು ನಡೆಯಲಿರುವ ಶಿವಜಯಂತಿ ಮತ್ತು 26 ರಂದು ನಡೆಯಲಿರುವ ಬಸವ ಜಯಂತಿಯ ಮೆರವಣಿಗೆ ಹಿನ್ನೆಲೆ ಮಹಾಪೌರ ಮತ್ತು ಉಪಮಹಾಪೌರರು ಮೆರವಣಿಗೆ ಮಾರ್ಗವನ್ನು ಪರಿಶೀಲಿಸಿದರು.

ಬೆಳಗಾವಿ ಇದು ಕರ್ನಾಟಕದಲ್ಲೇ ಅತಿ ವಿಜೃಂಭಣೆಯಿಂದ ಶಿವ ಮತ್ತು ಬಸವ ಜಯಂತಿಯನ್ನು ಆಚರಿಸುವ ನಗರವಾಗಿದೆ. ಇಲ್ಲಿ ನಡೆಯುವ ಶಿವಬಸವ ಜಯಂತಿಗೆ ಈಗಾಗಲೇ ಪೂರ್ವ ಸಿದ್ಧತೆಗಳು ಸಮರೋಪಾದಿಯಲ್ಲಿ ಜಾರಿಯಲ್ಲಿವೆ. ಇಂದು ಮಹಾಪೌರ ಪ್ರೀತಿ ಕಾಮಕರ್, ಉಪಮಹಾಪೌರ ಹನುಮಂತ ಕೊಂಗಾಲಿ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮೆರವಣಿಗೆಯ ಮಾರ್ಗವನ್ನು ಪರಿಶೀಲಿಸಿ ಸಮಸ್ಯೆಗಳನ್ನು ಆಲಿಸಿದರು.

ಮಹಾಪೌರ ಪ್ರೀತಿ ಕಾಮಕರ್ ಅವರು ಶಿವಜಯಂತಿ ಮತ್ತು ಬಸವ ಜಯಂತಿ ಹಿನ್ನೆಲೆ ಮೆರವಣಿಗೆ ಮಾರ್ಗವನ್ನು ಪರಿಶೀಲಿಸಲಾಗಿದೆ. ಇಲ್ಲಿರುವ ಕುಂದು ಕೊರತೆಗಳನ್ನು ನಿವಾರಿಸಿ ಶಾಂತಿಪೂರ್ಣ ಶಿವ ಬಸವ ಜಯಂತಿಯನ್ನು ಆಚರಿಸಲು ಅನುವು ಮಾಡಿಕೊಡಲಾಗುವುದು ಎಂದು ಭರವಸೆಯನ್ನು ನೀಡಿದರು.

ಶಿವ ಜಯಂತಿ ಉತ್ಸವ ರೂಪಕ ವಾಹನ ಮಹಾಮಂಡಳದ ಅಧ್ಯಕ್ಷ ಸುನೀಲ್ ಜಾಧವ್ ಅವರು ಇಂದು ಮಹಾಪೌರ ಉಪಮಹಾಪೌರರು ಸೇರಿದಂತೆ ಅಧಿಕಾರಿಗಳು ಶಿವಜಯಂತಿ ಉತ್ಸವದ ಮೆರವಣಿಗೆ ಮಾರ್ಗವನ್ನು ಪರಿಶೀಲಿಸಿದ್ದು, ಸಮಸ್ಯೆಗಳನ್ನು 2 ದಿನಗಳಲ್ಲಿ ನಿವಾರಿಸುವ ಭರವಸೆಯನ್ನು ನೀಡಿದ್ದಾರೆ ಎಂದರು.

ಉಪಮಹಾಪೌರ ಹನುಮಂತ ಕೊಂಗಾಲಿ ಅವರು ಶಿವಬಸವ ಜಯಂತಿಯ ವೇಳೆ ಜನರಿಗೆ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾನಗರ ಪಾಲಿಕೆ ಬದ್ಧವಾಗಿದೆ. ಹೊಟೇಲ್ ಮಾಲೀಕರು ಕೂಡ ಜನರ ಹಿತದಲ್ಲಿ ಕಾರ್ಯವನ್ನು ನಿರ್ವಹಿಸಬೇಕೆಂದರು.

ಆಡಳಿತ ಪಕ್ಷದ ನಾಯಕ ಸಂತೋಷ್ ಪೇಡನೆಕರ ಅವರು ರಸ್ತೆ, ಕುಡಿಯುವ ನೀರು, ಬೀದಿ ದೀಪ, ಮೊಬೈಲ್ ಶೌಚಾಲಯ, ಮರಗಳ ಕೊಂಬೆಗಳನ್ನು ಕತ್ತರಿಸುವುದು ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಮಹಾಪೌರ-ಉಪಮಹಾಪೌರರು ಮತ್ತು ಅಧಿಕಾರಿಗಳು ಭರವಸೆವನ್ನು ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮಹಾಪೌರ ಆನಂದ ಚವ್ಹಾಣ್, ನಗರಸೇವಕ ಗಿರೀಶ್ ಧೋಂಗಡಿ, ಜಯತೀರ್ಥ್ ಸವದತ್ತಿ, ಶ್ರೇಯಸ್ ನಾಕಾಡಿ, ರಾಜು ಭಾತಕಾಂಡೆ, ಜಯಂತ್ ಜಾಧವ್, ನೀತಿನ್ ಜಾಧವ್, ಮಹಾಮಂಡಳದ ಜೆ.ಬಿ. ಶಹಾಪುರಕರ, ಪ್ರಸಾದ್ ಮೋರೆ, ವಿನಾಯಕ ಬಾವಡೇಕರ, ಕರಣ್ ಭಗತ್, ಗುಣವಂತ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!