• ಎಸ್ಸಿ-ಎಸ್ಟಿ ಕುಟುಂಬಗಳಿಗೆ ಸರ್ಕಾರದ ಭರ್ಜರಿ ಕೊಡುಗೆ
• ರಾಜ್ಯಾದ್ಯಂತ ಬೃಹತ್ ನಿವೇಶನ ಹಂಚಿಕೆ ಯೋಜನೆ
• ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಘೋಷಣೆ
• ಲೇಔಟ್ ಮಾದರಿಯಲ್ಲಿ ಸಕಲ ಸೌಲಭ್ಯಗಳ ಸೈಟು
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯಂದೇ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಅತ್ಯಂತ ಆಶಾದಾಯಕ ಸುದ್ದಿಯೊಂದನ್ನು ನೀಡಿದೆ. ರಾಜ್ಯಾದ್ಯಂತ ವಸತಿ ರಹಿತರಾಗಿರುವ ಈ ಸಮುದಾಯದ ಜನರಿಗೆ ಸಕಲ ಮೂಲಭೂತ ಸೌಕರ್ಯಗಳನ್ನೊಳಗೊಂಡ ನಿವೇಶನಗಳನ್ನು ಹಂಚುವ ಬೃಹತ್ ಯೋಜನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಘೋಷಿಸಿದ್ದಾರೆ.
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಸ್ವಂತ ಮನೆಯ ಕನಸನ್ನು ನನಸು ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ‘ಬುದ್ಧ-ಬಸವ-ಅಂಬೇಡ್ಕರ್’ ಹೆಸರಿನಡಿ ನೂತನ ಬಡಾವಣೆಗಳನ್ನು ನಿರ್ಮಿಸಲು ಹಸಿರು ನಿಶಾನೆ ತೋರಿಸಲಾಗಿದೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕೇವಲ ನಿವೇಶನ ನೀಡುವುದು ಮಾತ್ರವಲ್ಲದೆ, ಲೇಔಟ್ ಮಾದರಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು. ಬೈಟ್
ಮುಂದಿನ ಎರಡು ವರ್ಷಗಳಲ್ಲಿ ಒಟ್ಟು ಒಂದು ಸಾವಿರ ಎಕರೆ ಜಮೀನಿನಲ್ಲಿ ಈ ಬೃಹತ್ ಯೋಜನೆ ಜಾರಿಗೆ ಬರಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಸತಿಗಾಗಿ ನಿವೇಶನಗಳ ಜೊತೆಗೆ ದನದ ಕೊಟ್ಟಿಗೆ ಮತ್ತು ಕಿಚನ್ ಗಾರ್ಡನ್ಗಾಗಿ ಜಾಗವನ್ನೊಳಗೊಂಡ ನಿವೇಶನಗಳನ್ನು ನೀಡಲು ಉದ್ದೇಶಿಸಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಜಮೀನು ಖರೀದಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಎಕರೆಗೆ ಗರಿಷ್ಠ 50 ಲಕ್ಷ ರೂ.ವರೆಗೆ ದರ ನಿಗದಿಪಡಿಸಲಾಗಿದೆ. ಬೈಟ್
ವಿಶೇಷವೆಂದರೆ, ಈ ಯೋಜನೆಯಡಿ ಫಲಾನುಭವಿಗಳಾಗಿ ಕಡ್ಡಾಯವಾಗಿ ಮಹಿಳೆಯರನ್ನೇ ಪರಿಗಣಿಸಲಾಗುವುದು. ಅರ್ಜಿದಾರರು ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರಬಾರದು ಎಂಬ ಕಟ್ಟುನಿಟ್ಟಿನ ನಿಯಮವನ್ನೂ ರೂಪಿಸಲಾಗಿದೆ. ಗ್ರಾಮೀಣ ದಲಿತ ಕೇರಿಗಳಲ್ಲಿ ದಾಖಲೆಗಳಿಲ್ಲದೆ ವಾಸಿಸುತ್ತಿರುವ ಜನರಿಗೆ ಈ ಯೋಜನೆಯಿಂದ ಕಾನೂನುಬದ್ಧ ಆಸ್ತಿ ಹಕ್ಕು ಲಭ್ಯವಾಗಲಿದ್ದು, ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

